ಭುವನೇಶ್ವರ: ಒಡಿಶಾದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು ಏಪ್ರಿಲ್ 1 ರಿಂದ ಪ್ರಾರಂಭವಾಗಲಿದ್ದು, ರಾಜ್ಯದಲ್ಲಿ ಶೇ 90ರಷ್ಟು ಮತದಾರರ ಹೆಸರು 2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಆಗುತ್ತಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಒಡಿಶಾದ ಮುಖ್ಯ ಚುನಾವಣಾ ಅಧಿಕಾರಿ ಸಿಇಒ ಆರ್.ಎಸ್. ಗೋಪಾಲನ್ ಮಾತನಾಡಿ, ಮ್ಯಾಪಿಂಗ್ ಪ್ರಕ್ರಿಯೆಯು ಮುಂದಿನ 15 ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೊನೆಯ ಬಾರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು ಎರಡು ದಶಕಗಳ ಹಿಂದೆ ನಡೆದಿತ್ತು ಎಂದು ಗೋಪಾಲನ್ ತಿಳಿಸಿದ್ದಾರೆ.
ಚುನಾವಣಾ ಆಯೋಗದ ಸೂಚನೆಗಳ ಪ್ರಕಾರ, 2002ರ ಮತದಾರರ ಪಟ್ಟಿಯ ಆಧಾರದಡಿ 2025ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಮ್ಯಾಪಿಂಗ್ ಸಮಯದಲ್ಲಿ, ಮತದಾರರ ಹೆಸರು, ಹತ್ತಿರದ ಸಂಬಂಧಿ, ವಯಸ್ಸು ಅಥವಾ ಜನ್ಮ ದಿನಾಂಕ, ಮತಗಟ್ಟೆ, ವಾರ್ಡ್ ಸಂಖ್ಯೆ ಮತ್ತು ಇಪಿಐಸಿ ವಿವರಗಳನ್ನು ಹೊಂದಾಣಿಕೆ ಮಾಡಲಾಗುತ್ತದೆ. ಬೂತ್ ಮಟ್ಟದ ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಮತದಾರರು ಇಸಿಐಎನ್‌ಇಟಿ ಪೋರ್ಟಲ್, ಮತದಾರರ ಸೇವಾ ಪೋರ್ಟಲ್, ಮತ್ತು ಇಸಿಐಎನ್‌ಇಟಿ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಬಹುದು ಎಂದು ಗೋಪಾಲನ್ ತಿಳಿಸಿದ್ದಾರೆ.
ಜನರು 2025 ಮತ್ತು 2002ರ ಮತದಾರರ ಪಟ್ಟಿಗಳಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳುವಂತೆ ಹಾಗೂ ಸಂಬಂಧಿತ ವಿವರಗಳನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ಒದಗಿಸುವಂತೆ ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

