ಢಾಕಾ: ಬಾಂಗ್ಲಾದೇಶದ ರಾಜ್‌ಬಾಢಿ ಜಿಲ್ಲೆಯಲ್ಲಿ, ಬಸ್ ನದಿಗೆ ಉರುಳಿ 24 ಮಂದಿ ಸಾವಿಗೀಡಾಗಿದ್ದು, ಹಲವರು ಕಾಣೆಯಾಗಿದ್ದಾರೆ. ಇಲ್ಲಿನ ಪದ್ಮಾ ನದಿಯ ದೌಲಾದಿಯಾ ಟರ್ಮಿನಲ್‌ನಲ್ಲಿ ಲಾಂಚ್ (ಬಾರ್ಜ್) ಮೇಲೆ ಬಸ್ ಏರುತ್ತಿದ್ದ ವೇಳೆ ಬುಧವಾರ ಅವಘಢ ಸಂಭವಿಸಿದೆ.
ಢಾಕಾಗೆ ತೆರಳುತ್ತಿದ್ದ ಬಸ್‌ನಲ್ಲಿ 40 ಮಂದಿ ಪ್ರಯಾಣಿಕರಿದ್ದರು ಎಂದು ಅಂದಾಜಿಸಲಾಗಿದೆ. ಹಲವು ಪ್ರಯಾಣಿಕರು ಒಂದೇ ಕುಟುಂಬದ ಸದಸ್ಯರು. 11 ಪ್ರಯಾಣಿಕರು ಈಜಿಕೊಂಡು ಹಾಗೂ ಸ್ಥಳೀಯರ ನೆರವಿನಿಂದ ಜೀವ ಉಳಿಸಿಕೊಂಡಿದ್ದಾರೆ. ಈವರೆಗೆ 24 ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದರು.
ಬಸ್ ಅನ್ನು ನದಿಯಿಂದ ಹೊರತೆಗೆಯಲಾಗಿದ್ದು, ಕಾಣೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಮೃತರಲ್ಲಿ 11 ಮಹಿಳೆಯರು ಹಾಗೂ ಆರು ಮಕ್ಕಳು ಇದ್ದಾರೆ.
'ಬಸ್ ಇದ್ದ ಲಾಂಚ್‌ಗೆ ಬೇರೊಂದು ಸಣ್ಣ ಲಾಂಚ್ ಡಿಕ್ಕಿಯಾಯಿತು. ಈ ವೇಳೆ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಅದು ನದಿಗೆ ಉರುಳಿತು. ನಮ್ಮ ಕಣ್ಣು ಮುಂದೆಯೇ ಈ ಘಟನೆ ನಡೆದಿದೆ. ನಮಗೆ ಏನೂ ಮಾಡಲು ಸಾಧ್ಯವಾಗಲಿಲ್ಲ' ಎಂದು ಟರ್ಮಿನಲ್‌ನ ಮೇಲ್ವಿಚಾರಕ ಮೊನೀರ್ ಹುಸೇನ್ ಹೇಳಿದರು.
ಪ್ರಧಾನಿ ಪ್ರಧಾನಿ ತಾರಿಕ್ ರೆಹಮಾನ್ ಅವರು ಜಿಲ್ಲಾಡಳಿತದ ಅಧಿಕಾರಿಗಳಿಗೆ ಕರೆ ಮಾಡಿ, ಘಟನೆ ಕುರಿತು ಮಾಹಿತಿ ಪಡೆದಿದ್ದು, ತನಿಖೆಗೆ ಆದೇಶಿಸಿದ್ದಾರೆ.

