ನವದೆಹಲಿ: ರಾಜಸ್ಥಾನದಲ್ಲಿರುವ ತಳಿ ಸಂವರ್ಧಕ ಕೇಂದ್ರದಲ್ಲಿ 'ಹೆಬ್ಬಕ್ಕ' ಪಕ್ಷಿಯ (ಗ್ರೇಟ್ ಇಂಡಿಯನ್ ಬಸ್ಟರ್ಡ್) ಎರಡು ಮರಿಗಳು ಜನಿಸಿವೆ.
'ಅಳಿವಿನಂಚಿನಲ್ಲಿರುವ ಈ ಪಕ್ಷಿಗಳ ಸಂರಕ್ಷಣೆಗಾಗಿ ಸ್ಥಾಪಿಸಿರುವ 'ಪ್ರಾಜೆಕ್ಟ್ ಗ್ರೇಟ್ ಇಂಡಿಯನ್ ಬಸ್ಟರ್ಡ್' (ಜಿಐಬಿ) ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ.
ಗ್ರೇಟ್ ಇಂಡಿಯನ್ ಬಸ್ಟರ್ಡ್ ಮರಿಗಳ ಪೈಕಿ ಒಂದು ನೈಸರ್ಗಿಕ ಸಂಯೋಗದಿಂದ ಮತ್ತು ಇನ್ನೊಂದು ಕೃತಕ ಗರ್ಭಧಾರಣೆಯ ಮೂಲಕ ಜನಿಸಿದೆ. ಕೇಂದ್ರದಲ್ಲಿ ಈಗ ಒಟ್ಟು 70 ಪಕ್ಷಿಗಳಿವೆ' ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು 'ಎಕ್ಸ್'ನಲ್ಲಿ ಶುಕ್ರವಾರ ತಿಳಿಸಿದ್ದಾರೆ.
'ಈ ಪ್ರಭೇದದ ಸಂರಕ್ಷಣೆಯ ಪ್ರಯತ್ನಗಳಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ. ಈ ವರ್ಷ ಪಳಗಿಸಿದ ಕೆಲ ಮರಿಗಳನ್ನು ಕಾಡಿಗೆ ಹಂತ ಹಂತವಾಗಿ ಬಿಡಲಾಗುವುದು. ಈ ಯೋಜನೆಯ ಪಾಲಿಗೆ ಇದು ಹೊಸ ಸವಾಲಿನ ಆರಂಭವಾಗಿದೆ' ಎಂದು ಹೇಳಿದ್ದಾರೆ.

