ತೀವ್ರಗೊಳ್ಳುತ್ತಿರುವ ಸಂಘರ್ಷದಿಂದಾಗಿ ದ್ರವೀಕೃತ ನೈಸರ್ಗಿಕ ಅನಿಲ ಪೂರೈಕೆಯು ಮೊಟಕುಗೊಂಡಿರುವುದರಿಂದ ಕೆಲವು ರಸಗೊಬ್ಬರ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಮುಚ್ಚುವುದು ಅನಿವಾರ್ಯವಾಗಲಿದೆ, ಹೀಗಾಗಿ ರಫ್ತು ನಿರ್ಬಂಧಗಳನ್ನು ಸಡಲಿಸುವಂತೆ ಭಾರತೀಯ ಅಧಿಕಾರಿಗಳು ತಮ್ಮ ಚೀನಿ ಸಹವರ್ತಿಗಳನ್ನು ಕೋರಿಕೊಂಡಿದ್ದಾರೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ನಿರ್ಧಾರವನ್ನು ಇನ್ನಷ್ಟೇ ತೆಗೆದುಕೊಳ್ಳಬೇಕಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಇತ್ತೀಚಿನ ಲಭ್ಯ ದತ್ತಾಂಶಗಳ ಪ್ರಕಾರ ವಿಶ್ವ ಆಹಾರ ಉತ್ಪಾದನೆಯಲ್ಲಿ ನಿರ್ಣಾಯಕ ಹಾಗೂ ಅತ್ಯಂತ ಸಾಮಾನ್ಯವಾಗಿ ಬಳಕೆಯಾಗುವ ಸಾರಜನಕ ರಸಗೊಬ್ಬರವಾಗಿರುವ ಯೂರಿಯಾದ ಜಾಗತಿಕ ಬೆಲೆಗಳು ಇರಾನ್ ಯುದ್ಧದ ಮೊದಲ ವಾರದಲ್ಲಿ ಶೇ.21ರಷ್ಟು ಏರಿಕೆಯಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಅತ್ಯಧಿಕ ಮಟ್ಟವನ್ನು ತಲುಪಿವೆ.
ಚೀನಾ ಕೋಟಾ ವ್ಯವಸ್ಥೆಯಡಿ ಯೂರಿಯಾ ರಫ್ತುಗಳನ್ನು ನಿಯಂತ್ರಿಸುತ್ತದೆ. ಕಳೆದ ವರ್ಷ ಭಾರತ ಸೇರಿದಂತೆ ಕೆಲವು ರಫ್ತುಗಳನ್ನು ಅದು ಅನುಮತಿಸಿದ್ದರೂ,2026ರಲ್ಲಿ ಸರಕು ಸಾಗಣೆಗೆ ಇನ್ನಷ್ಟೇ ಅವಕಾಶವನ್ನು ಕಲ್ಪಿಸಬೇಕಿದೆ ಎಂದು ಮೂಲಗಳು ತಿಳಿಸಿವೆ. ಚೀನಾ ವಿಶ್ವದ ಅಗ್ರ ಯೂರಿಯಾ ಉತ್ಪಾದಕ ದೇಶವಾಗಿದ್ದು,ಅಲ್ಲಿಯ ರೈತರು ಮುಂದಿನ ಹಂಗಾಮಿನ ಬೆಳೆಗೆ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಇದು ಗರಿಷ್ಠ ಯೂರಿಯಾ ಬಳಕೆಯ ಅವಧಿಯಾಗಿದೆ.
ಸ್ಥಳೀಯ ತಯಾರಿಕೆಯನ್ನು ಉತ್ತೇಜಿಸಲು ಭಾರತವು ನೆರೆಯ ದೇಶಗಳಿಗೆ ಹೂಡಿಕೆ ನಿಯಮಗಳನ್ನು ಸಡಲಿಸಿದೆ. ಇದು ಮುಖ್ಯವಾಗಿ ಚೀನಾವನ್ನು ಗುರಿಯಾಗಿಸಿಕೊಂಡಿದ್ದು,ಅದರೊಂದಿಗೆ ಆರ್ಥಿಕ ಸಂಬಂಧಗಳು ಸುಧಾರಿಸುತ್ತಿರುವ ಸಂಕೇತಗಳನ್ನು ನೀಡಿದೆ. ಈ ಸಂದರ್ಭದಲ್ಲಿಯೇ ಭಾರತವು ಯೂರಿಯಾ ಪೂರೈಕೆಗಾಗಿ ಚೀನಾಕ್ಕೆ ಮನವಿ ಮಾಡಿಕೊಂಡಿದೆ.
ಭಾರತವು ತಕ್ಷಣಕ್ಕೆ ರಸಗೊಬ್ಬರ ಕೊರತೆಯನ್ನು ಎದುರಿಸುತ್ತಿಲ್ಲ,ಆದರೂ ಅದು ವಿಶ್ವದ ಅತಿ ದೊಡ್ಡ ಯೂರಿಯಾ ಆಮದು ದೇಶವಾಗಿದ್ದು ಅನಿಲ ಪೂರೈಕೆಯಲ್ಲಿ ಯಾವುದೇ ದೀರ್ಘ ವ್ಯತ್ಯಯವು ಸಮಸ್ಯೆಯನ್ನುಂಟು ಮಾಡಬಹುದು. ಜೂನ್‌ನಲ್ಲಿ ಮಳೆಗಾಲದ ಆಗಮನದೊಂದಿಗೆ ಬಿತ್ತನೆ ಹಂಗಾಮು ಆರಂಭಗೊಳ್ಳುವುದಕ್ಕೆ ಮುನ್ನ ಅದು ಹೆಚ್ಚಿನ ಪೂರೈಕೆಗಾಗಿ ಇತರ ದೇಶಗಳತ್ತ ನೋಡುವುದನ್ನು ಅನಿವಾರ್ಯವಾಗಿಸಲಿದೆ. ಕೊರತೆಯನ್ನು ನೀಗಿಸಲು ಸಂಭಾವ್ಯ ಆಮದು ಮೂಲಗಳಲ್ಲಿ ಚೀನಾ, ರಶ್ಯಾ, ಇಂಡೋನೇಶ್ಯಾ, ಮಲೇಶಿಯಾ ಮತ್ತು ಈಜಿಪ್ಟ್ ಸೇರಿವೆ.

