ನವದೆಹಲಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಉಭಯ ದೇಶಗಳ ನಾಯಕರು ನಡೆಸುತ್ತಿರುವ 4ನೇ ಸುತ್ತಿನ ಮಾತುಕತೆ ಇದಾಗಿದೆ.
ಜೈಶಂಕರ್ ಹಾಗೂ ಅರಘ್ಚಿ ಅವರು ಗುರುವಾರ ರಾತ್ರಿ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ಜೈಶಂಕರ್, 'ಅರಘ್ಚಿ ಅವರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದೇನೆ. ದ್ವಿಪಕ್ಷೀಯ ಸಂಬಂಧಗಳು ಹಾಗೂ 'ಬ್ರಿಕ್ಸ್' ಕುರಿತ ವಿಷಯಗಳ ಕುರಿತೂ ಚರ್ಚಿಸಿದೆವು' ಎಂದಿದ್ದಾರೆ.
ಹೊರ್ಮುಜ್ ಜಲಸಂಧಿ ಮೂಲಕ ಹಾದು ಹೋಗಲು ಭಾರತೀಯ ಹಡಗುಗಳಿಗೆ ಅವಕಾಶ ನೀಡುವಂತೆ ಭಾರತವು ಇರಾನ್ ಅನ್ನು ಕೇಳುತ್ತಿದೆ. ಎರಡೂ ಬದಿಗಳಲ್ಲಿ ನಿಂತಿರುವ 28 ಹಡಗುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲೂ ಪ್ರಯತ್ನಿಸುತ್ತಿದೆ.
'ಅಮೆರಿಕ ಹಾಗೂ ಇಸ್ರೇಲ್‌ನೊಂದಿಗೆ ಸಂಘರ್ಷ ಉಲ್ಬಣಗೊಂಡಾಗಿನಿಂದ ಈವರೆಗೆ ಉಂಟಾದ ಪರಿಣಾಮಗಳ ಬಗ್ಗೆ ಅರಘ್ಚಿ ಅವರು ಜೈಶಂಕರ್‌ಗೆ ವಿವರಿಸಿದರು. ಇರಾನ್ ವಿರುದ್ಧದ ಸೇನಾ ದಾಳಿಯನ್ನು ಅಂತರರಾಷ್ಟ್ರೀಯ ಹಾಗೂ ಪ್ರಾದೇಶಿಕ ಸಂಘಟನೆಗಳು ಖಂಡಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಪ್ರಪಂಚದ ಸ್ಥಿರತೆ ಹಾಗೂ ಭದ್ರತೆಯನ್ನು ಬೆಂಬಲಿಸಲು ಈ ಸಮಯದಲ್ಲಿ 'ಬ್ರಿಕ್ಸ್' ಮುಂದೆ ಬರಬೇಕು ಎಂದೂ ತಿಳಿಸಿದರು' ಎಂದು ಇರಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

