ಭಾರತೀಯ ಶೇರು ಮಾರುಕಟ್ಟೆಗಳ ಸೂಚ್ಯಂಕಗಳು ನಿರಂತರವಾಗಿ ಕುಸಿಯುತ್ತಲೇ ಇವೆ.
ಸೋಮವಾರ ಒಂದೇ ದಿನ ಮಾರುಕಟ್ಟೆ ಬಂಡವಾಳೀಕರಣ 12.78 ಲಕ್ಷ.ಕೋಟಿ.ರೂ.ಗಳಷ್ಟು ಕರಗಿದೆ. ದಿನದ ವಹಿವಾಟಿನ ನಡುವೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 2000 ಕ್ಕೂ ಅಧಿಕ ಅಂಶಗಳ ಕುಸಿತವನ್ನು ದಾಖಲಿಸಿತ್ತು,ಆದಾಗ್ಯೂ ನಂತರ ಚೇತರಿಸಿಕೊಂಡು ದಿನದ ಅಂತ್ಯದಲ್ಲಿ 1352.74 ಅಂಶಗಳ (ಶೇ.1.71) ಕುಸಿತದೊಂದಿಗೆ 77,566.16ರಲ್ಲಿ ಮುಕ್ತಾಯಗೊಂಡಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 50 ಮಧ್ಯಂತರದ ವಹಿವಾಟಿನಲ್ಲಿ 700ಕ್ಕೂ ಅಧಿಕ ಅಂಶಗಳಷ್ಟು ಕುಸಿದಿದ್ದು,ನಂತರ ಚೇತರಿಸಿಕೊಂಡು 422.40 ಅಂಶಗಳ (ಶೇ.1.73) ಕುಸಿತದೊಂದಿಗೆ 24,028.05ರಲ್ಲಿ ದಿನದಾಟವನ್ನು ಮುಗಿಸಿದೆ. ಇಂದಿನ ಕುಸಿತ ಶೇರು ಮಾರುಕಟ್ಟೆಯು ಈ ವರ್ಷ ಅನುಭವಿಸಿದ ಭಾರೀ ಹೊಡೆತಗಳಲ್ಲಿ ಒಂದಾಗಿದೆ.
ಇತ್ತೀಚಿನ ಭೂರಾಜಕೀಯ ಉಲ್ಬಣತೆಯ ಬಳಿಕ ಲಿಸ್ಟ್ ಆಗಿರುವ ಎಲ್ಲ ಕಂಪೆನಿಗಳ ಸಂಯೋಜಿತ ಮಾರುಕಟ್ಟೆ ಬಂಡವಾಳೀಕರಣವು ತೀವ್ರವಾಗಿ ಕುಗ್ಗಿರುವುದನ್ನು ಬಾಂಬೆ ಶೇರು ವಿನಿಮಯ ಕೇಂದ್ರದ ದತ್ತಾಂಶಗಳು ತೋರಿಸಿವೆ.

