ನವದೆಹಲಿ: ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದಕ್ಕಾಗಿ ರಷ್ಯಾದಿಂದ ಐದು ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸಲು ಭಾರತವು ಒಟ್ಟು ₹2.38 ಲಕ್ಷ ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.
ಹಳೆಯದಾದ ಎಎನ್-32 ವಿಮಾನಗಳ ಬದಲು ಮಧ್ಯಮ ಶ್ರೇಣಿಯ 60 ಸಾರಿಗೆ ವಿಮಾನಗಳ ಖರೀದಿಯೂ ಈ ಒಪ್ಪಂದಲ್ಲಿ ಸೇರಿದೆ. ಖರೀದಿ ಒಪ್ಪಂದಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಸಮಿತಿಯು ಅನುಮೋದನೆ ನೀಡಿದೆ.
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಭಾರತಕ್ಕೆ ಬರುವುದು ತಡವಾಗಿತ್ತು. ಈ ವರ್ಷಾಂತ್ಯದೊಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯು, ದೂರದಿಂದಲೇ ಶತ್ರು ಪಡೆಯ ಕ್ಷಿಪಣಿಯನ್ನು ಗುರುತಿಸಿ, ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ರಷ್ಯಾದಿಂದ ತಂಗುಸ್ಕಾ ಹೆಸರಿನ ವಾಯು ರಕ್ಷಣಾ ಕ್ಷಿಪಣಿ ಖರೀದಿಗೆ ₹445 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ. ನೌಕಾಪಡೆಯ 'ಪಿ8ಐ' ಯುದ್ಧವಿಮಾನಗಳ ನಿರ್ವಹಣೆಗಾಗಿ ಬೋಯಿಂಗ್ ಕಂಪನಿಯೊಂದಿಗೆ ₹413 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

