HEALTH TIPS

ತೈಲ ಸುಂಕದಲ್ಲಿ ₹10 ಕಡಿತ, ವಾಣಿಜ್ಯ ಎಲ್‌ಪಿಜಿ ಹಂಚಿಕೆ ಹೆಚ್ಚಳ

ನವದೆಹಲಿ: ‌ಕೇಂದ್ರ ಸರ್ಕಾರವು ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ವಿಶೇಷ ಎಕ್ಸೈಸ್‌ ಸುಂಕದಲ್ಲಿ ಶುಕ್ರವಾರ ಲೀಟರ್‌ಗೆ ₹10ರಷ್ಟು ಕಡಿತ ಮಾಡಿದೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ತೈಲೋತ್ಪನ್ನಗಳ ಬೆಲೆಯಲ್ಲಿನ ಹೆಚ್ಚಳದ ಪರಿಣಾಮ ಈ ಇಂಧನಗಳ ದರದ ಮೇಲೂ ಆಗುತ್ತಿತ್ತು.

ಇದನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದಾಗಿ ಸರ್ಕಾರ ಹೇಳಿದೆ.

ಈ ಮೊದಲು, ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ ವಿಶೇಷ ಹೆಚ್ಚುವರಿ ಸುಂಕ ₹13 ಇತ್ತು. ಈಗ ₹3ಕ್ಕೆ ಇಳಿಸಲಾಗಿದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್‌ ಮೇಲೆ ₹10 ಎಕ್ಸೈಸ್‌ ಸುಂಕ ಇತ್ತು. ಸರ್ಕಾರದ ಈ ನಿರ್ಧಾರದಿಂದಾಗಿ ಡೀಸೆಲ್‌ ಮೇಲೆ ಯಾವುದೇ ಎಕ್ಸೈಸ್‌ ಸುಂಕ ಇರುವುದಿಲ್ಲ.

ಈ ಕುರಿತು ಹಣಕಾಸು ಸಚಿವಾಲಯ ಗುರುವಾರ ತಡರಾತ್ರಿ ಅಧಿಸೂಚನೆ ಹೊರಡಿಸಿದ್ದು, ಎಕ್ಸೈಸ್‌ ಸುಂಕ ಕಡಿತ ಕ್ರಮವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಪೆಟ್ರೋಲ್‌ ಪಂಪ್‌ಗಳಲ್ಲಿ ಮಾರಾಟವಾಗುವ ಇಂಧನ ದರಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಈ ಕ್ರಮದಿಂದಾಗಿ ಆದಾಯದಲ್ಲಿ ₹1.75 ಲಕ್ಷ ಕೋಟಿಯಷ್ಟು ನಷ್ಟ ಉಂಟಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.

ಎಕ್ಸೈಸ್‌ ಸುಂಕ ಕಡಿತ ಮಾಡುವ ನಿರ್ಧಾರದಿಂದ ತೈಲ ಕಂಪನಿಗಳಿಗೆ ಸ್ವಲ್ಪ ಮಟ್ಟಿನ ನಿರಾಳತೆ ಸಿಕ್ಕಂತಾಗಿದೆ. ಈ ಕುರಿತ ಅಧಿಸೂಚನೆ ಹೊರಬಿದ್ದ ಬಳಿಕ ಮುಂಬೈ ಷೇರುಪೇಟೆಯಲ್ಲಿ ಐಒಸಿ, ಬಿಪಿಸಿಲ್‌ ಹಾಗೂ ಎಚ್‌ಪಿಸಿಲ್‌ ಷೇರುಗಳ ಬೆಲೆಗಳಲ್ಲಿ ಶುಕ್ರವಾರ ಏರಿಕೆ ಕಂಡುಬಂದಿದೆ.

ಡೀಸೆಲ್‌ ಮತ್ತು ವಿಮಾನ ಇಂಧನ (ಎಟಿಎಫ್‌) ರಫ್ತು ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಪುನಃ ಜಾರಿಗೊಳಿಸಿದೆ.

ಪ್ರತಿ ಲೀಟರ್‌ ಡೀಸೆಲ್‌ ಹಾಗೂ ವಿಮಾನ ಇಂಧನ ಮೇಲೆ ಕ್ರಮವಾಗಿ ₹21.5 ಹಾಗೂ ₹29.5 ರಫ್ತು ಸುಂಕ ವಿಧಿಸಲಾಗಿದೆ. ಕಚ್ಚಾ ತೈಲ ಸಂಸ್ಕರಣೆಯಲ್ಲಿ ತೊಡಗಿರುವ ಒಎನ್‌ಜಿಸಿ ಸೇರಿದಂತೆ ದೇಶೀಯ ಕಂಪನಿಗಳ ಮೇಲೆ ಆಕಸ್ಮಿಕ ಲಾಭ ತೆರಿಗೆ ವಿಧಿಸಿಲ್ಲ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ತೈಲದ ಬೆಲೆ ಶೇ 50ರಷ್ಟು ಹೆಚ್ಚಳವಾಗಿ 100 ಡಾಲರ್‌ ತಲುಪಿದೆ. ಜಾಗತಿಕ ಮಾರುಕಟ್ಟೆ ಪರಿಸ್ಥಿತಿಯಂತೆ, ಪ್ರತಿ ಲೀಟರ್ ಕಚ್ಚಾ ತೈಲ ಹಾಗೂ ಪೆಟ್ರೋಲ್‌ ಬೆಲೆಯಲ್ಲಿ ₹26 ಹಾಗೂ ಪ್ರತಿ ಲೀಟರ್‌ ಡೀಸೆಲ್‌ ಬೆಲೆಯಲ್ಲಿ ₹81.90 ಹೆಚ್ಚಾಗಬೇಕಿತ್ತು.

- ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆಇಂಧನ ಮೇಲಿನ ಅಬಕಾರಿ ಸುಂಕದಲ್ಲಿ ಮಾಡಿರುವ ಕಡಿತದಿಂದ ಗ್ರಾಹಕರಿಗೆ ಇವುಗಳ ದರದಲ್ಲಿ ಆಗುವ ಹೆಚ್ಚಳದಿಂದ ರಕ್ಷಣೆ ಸಿಗಲಿದೆ. ಅಗತ್ಯ ವಸ್ತುಗಳ ಪೂರೈಕೆ ಮತ್ತು ಬೇಡಿಕೆಯಲ್ಲಾಗುವ ಏರಿಳಿತದ ಬಿಸಿ ಜನರಿಗೆ ತಟ್ಟದಂತೆ ಸರ್ಕಾರ ಕ್ರಮಗೊಳ್ಳುತ್ತಿದೆ- ಹರದೀಪ್‌ ಸಿಂಗ್‌ ಪುರಿ, ಕೇಂದ್ರ ಪೆಟ್ರೋಲಿಯಂ ಸಚಿವಪೆಟ್ರೋಲ್‌ ಡೀಸೆಲ್‌ ಬೆಲೆಯಲ್ಲಿ ಹೆಚ್ಚಳ ಮಾಡುವುದು ಇಲ್ಲವೇ ಹಣಕಾಸು ಹೊರೆ ಹೊರಬೇಕು ಎಂಬ ಎರಡೇ ಆಯ್ಕೆಗಳು ಸರ್ಕಾರದ ಮುಂದಿದ್ದವು. ದೇಶದ ಜನರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಹಣಕಾಸು ಹೊರೆ ಹೊರುವುದಕ್ಕೆ ಸರ್ಕಾರ ನಿರ್ಧರಿಸಿದೆ- ಪವನ್‌ ಖೇರಾ, ಕಾಂಗ್ರೆಸ್‌ ಐಟಿ ವಿಭಾಗದ ಮುಖ್ಯಸ್ಥಭಾರತ ರಿಯಾಯಿತಿ ದರದಲ್ಲಿ ರಷ್ಯಾದಿಂದಲೂ ಕಚ್ಚಾ ತೈಲ ಖರೀದಿಸಿದೆ. ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ. ಈ ವ್ಯವಹಾರದಿಂದ ಅಂಬಾನಿ ಮಾತ್ರ ಶ್ರೀಮಂತರಾಗಿದ್ದಾರೆ

ಕೇಂದ್ರದ ಕ್ರಮ: ವಿಪಕ್ಷಗಳ ಟೀಕೆ

ಬಿಜೆಪಿ ಸಮರ್ಥನೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಕಡಿತ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷಗಳು ಶುಕ್ರವಾರ ಟೀಕಿಸಿವೆ.

'ಈ ವಿಚಾರವಾಗಿ ಸರ್ಕಾರ ಬಹಳ ತಡವಾಗಿ ಕ್ರಮ ಕೈಗೊಂಡಿದೆಯಲ್ಲದೇ ಐದು ರಾಜ್ಯಗಳ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈಗ ಇಂತಹ ಕ್ರಮ ಕೈಗೊಳ್ಳಲಾಗಿದೆ' ಎಂದು ಟೀಕಾಪ್ರಹಾರ ಮಾಡಿವೆ. ಬಿಜೆಪಿ ನಾಯಕರು ಕೇಂದ್ರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

'ಕಳೆದ 12 ವರ್ಷಗಳ ಅವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ಏಳು ಬಾರಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕುಸಿದಿತ್ತು. ಆಗ ಭಾರತದಲ್ಲಿ ಪೆಟ್ರೋಲ್‌ ಡೀಸೆಲ್‌ ಬೆಲೆಗಳಲ್ಲಿ ಕಡಿತ ಮಾಡಿರಲಿಲ್ಲ' ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

'ಈಗ ಐದು ರಾಜ್ಯಗಳಲ್ಲಿನ ಚುನಾವಣೆ ಕಾರಣಕ್ಕೆ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕದಲ್ಲಿ ಕಡಿತ ಮಾಡಲಾಗಿದೆ. ಏಪ್ರಿಲ್‌ 30ರ ವರೆಗೆ ಕಾದು ನೋಡಿ' ಎಂದು ಅವರು ಟೀಕಿಸಿದ್ದಾರೆ.

'ಪೆಟ್ರೋಲ್‌ ಡೀಸೆಲ್ ಮೇಲಿನ ಎಕ್ಸೈಸ್‌ ಸುಂಕ ಕಡಿತ ಮಾಡಿರುವುದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ. ಇಂಧನ ಪೂರೈಕೆಯಲ್ಲಿ ತೊಂದರೆ ಇಲ್ಲ. ಎಲ್ಲವೂ ಸರಿ ಇದೆ ಎಂದು ಮೂರು ವಾರಗಳಿಂದಲೂ ಕೇಂದ್ರ ಸರ್ಕಾರ ಹೇಳುತ್ತಾ ಬಂದಿದೆ. ಈಗ ಎಕ್ಸೈಸ್‌ ಸುಂಕ ಇಳಿಸಿದೆ' ಎಂದು ಟಿಎಂಸಿ ರಾಜ್ಯಸಭಾ ಸಂಸದೆ ಸಾಗರಿಕಾ ಘೋಷ್‌ ಟೀಕಿಸಿದ್ದಾರೆ.

ಸಂಸದರಾದ ಪ್ರಿಯಾಂಕಾ ಚತುರ್ವೇದಿ (ಶಿವಸೇನಾ-ಯುಬಿಟಿ) ಅಭಯ ಕುಶ್ವಾಹ(ಆರ್‌ಜೆಡಿ) ಕೂಡ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ. 'ಸರ್ಕಾರವು ಸಕಾಲಿಕ ಹಾಗೂ ಅಗತ್ಯ ಕ್ರಮವನ್ನೇ ಕೈಗೊಂಡಿದೆ' ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

ವಾಣಿಜ್ಯ ಎಲ್‌ಪಿಜಿ ಹಂಚಿಕೆ ಹೆಚ್ಚಳ

ನವದೆಹಲಿ: ರಾಜ್ಯಗಳಿಗೆ ಹೆಚ್ಚುವರಿಯಾಗಿ ಶೇಕಡ 20ರಷ್ಟು ವಾಣಿಜ್ಯ ಎಲ್‌ಪಿಜಿ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಒಪ್ಪಿಗೆ ನೀಡಿದೆ. ಇದರಿಂದಾಗಿ ರಾಜ್ಯಗಳಿಗೆ ಹಂಚಿಕೆಯಾಗುವ ವಾಣಿಜ್ಯ ಬಳಕೆ ಎಲ್‌ಪಿಜಿ ಪ್ರಮಾಣವು ಶೇ 70ಕ್ಕೆ ಏರಿಕೆಯಾಗಲಿದೆ. ಉಕ್ಕು ವಾಹನೋದ್ಯಮ ಸೇರಿದಂತೆ ಕೈಗಾರಿಕೆಗಳ ಅಗತ್ಯಗಳನ್ನು ಪೂರೈಸಲು ಈ ಹೆಚ್ಚಳ ಮಾಡಲಾಗಿದೆ.

ಈ ಬಗ್ಗೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ತೈಲ ಸಚಿವಾಲಯದ ಕಾರ್ಯದರ್ಶಿ ನೀರಜ್ ಮಿತ್ತಲ್‌ ಅವರು ಉಕ್ಕು ವಾಹನೋದ್ಯಮ ಜವಳಿ ರಾಸಾಯನಿಕ ಮತ್ತು ಪ್ಲಾಸ್ಟಿಕ್‌ನಂತಹ ಕಾರ್ಮಿಕ ಕೇಂದ್ರಿತ ಉದ್ಯಮಗಳಿಗೆ ಹೆಚ್ಚುವರಿಯಾಗಿ ವಾಣಿಜ್ಯ ಎಲ್‌ಪಿಜಿ ಹಂಚಿಕೆಗೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಪ್ರಸ್ತುತ ವಾಣಿಜ್ಯ ಎಲ್‌ಪಿಜಿ ಹಂಚಿಕೆ ಶೇ 50ರಷ್ಟಿದೆ. ಈಗ ಶೇ 20ರಷ್ಟು ಹೆಚ್ಚಿಸಿದ್ದು ಒಟ್ಟಾರೆ ವಾಣಿಜ್ಯ ಎಲ್‌ಪಿಜಿ ಹಂಚಿಕೆ ಶೇ 70ರಷ್ಟಾಗಿದೆ. ಈ ಮೂಲಕ ಯುದ್ಧ ಆರಂಭವಾಗುವ ಮುನ್ನ ಇದ್ದ ಸಹಜ ಸ್ಥಿತಿಗೆ ತಲುಪಲಿದೆ ಎಂದು ವಿವರಿಸಿದ್ದಾರೆ.

ರೂಪಾಯಿ ಮೌಲ್ಯ 86 ಪೈಸೆ ಕುಸಿತ

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಶುಕ್ರವಾರದ ವಹಿವಾಟಿನಲ್ಲಿ 86 ಪೈಸೆಯಷ್ಟು ಕುಸಿದಿದ್ದು ಪ್ರತಿ ಡಾಲರ್ ಮೌಲ್ಯ 94.82 ಆಗಿದೆ. ಇದು ಇದುವರೆಗಿನ ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿದೆ. ಕಚ್ಚಾ ತೈಲದ ಬೆಲೆ ಮತ್ತು ಡಾಲರ್ ಮೌಲ್ಯದ ಏರಿಕೆಯಿಂದ ರೂಪಾಯಿ ಮೌಲ್ಯ ಇಳಿದಿದೆ ಎಂದು ವಿಶ್ಲೇಷಿಸಲಾಗಿದೆ.

ದೇಶದ ಷೇರುಪೇಟೆ ಸೂಚ್ಯಂಕ ಇಳಿಕೆ ಮತ್ತು ವಿದೇಶಿ ಬಂಡವಾಳದ ನಿರಂತರ ಹೊರಹರಿವು ರೂಪಾಯಿ ಮೌಲ್ಯ ಇಳಿಕೆಗೆ ಕಾರಣ ಎಂದು ಹೇಳಿದ್ದಾರೆ. ಶುಕ್ರವಾರದ ವಹಿವಾಟಿನ ಆರಂಭದಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು ₹94.18 ಇತ್ತು. ವಹಿವಾಟಿನ ಕೊನೆಯಲ್ಲಿ ಮೌಲ್ಯವು ₹94.82 ಆಗಿದೆ. ಬುಧವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 20 ಪೈಸೆಯಷ್ಟು ಕಡಿಮೆಯಾಗಿ 93.96 ಆಗಿತ್ತು. ರಾಮನವಮಿ ಅಂಗವಾಗಿ ಮಾರುಕಟ್ಟೆಗೆ ಗುರುವಾರ ರಜೆ ಇತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries