ಹೈದರಾಬಾದ್: ರಾಜ್ಯದ ರಾಜಧಾನಿಯಾಗಿ ಅಮರಾವತಿ ನಗರಕ್ಕೆ ಕಾನೂನುಬದ್ಧ ಮಾನ್ಯತೆ ನೀಡುವುದಕ್ಕೆ ಆಂಧ್ರಪ್ರದೇಶ ಪುನರ್‌ರಚನೆ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಶನಿವಾರ ಅಂಗೀಕರಿಸಲಾಯಿತು.
ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮಂಡಿಸಿದ ನಿರ್ಣಯ ಕುರಿತು ಸುದೀರ್ಘ ಐದೂವರೆ ಗಂಟೆ ಚರ್ಚೆ ನಡೆಸಿ, ಬಳಿಕ ಅಂಗೀಕರಿಸಲಾಯಿತು. ಇದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿತ್ತು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು,'ಅಮರಾವತಿಯು ಶಾಶ್ವತವಾಗಿ ಆಂಧ್ರಪ್ರದೇಶದ ರಾಜಧಾನಿಯಾಗಿರಲಿದೆ' ಎಂದು ಘೋಷಿಸಿದರು.
ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನಮೋಹನ್ ರೆಡ್ಡಿ ವಿರುದ್ಧ ಇದೇ ವೇಳೆ ವಾಗ್ದಾಳಿ ನಡೆಸಿದ ನಾಯ್ಡು,'ಅಮರಾವತಿ ಅಭಿವೃದ್ಧಿ ಯೋಜನೆಯನ್ನು ಜಗನ್ ಮೋಹನ್ ರೆಡ್ಡಿ ಸಮರ್ಪಕವಾಗಿ ಅನುಷ್ಠಾನ ಮಾಡಲಿಲ್ಲ. ಯೋಜನೆ ಕುರಿತು ಪದೇಪದೇ ತಮ್ಮ ನಿಲುವು ಬದಲಿಸುವ ಮೂಲಕ ಅಮರಾವತಿಗೆ ದ್ರೋಹ ಬಗೆದರು' ಎಂದರು.
'ಅಮರಾವತಿಯನ್ನು ಆಡಳಿತ ಕೇಂದ್ರವಾಗಿ ಮಾತ್ರವಲ್ಲ ಹೈದರಾಬಾದ್,ಬೆಂಗಳೂರು ಹಾಗೂ ಚೆನ್ನೈ ನಗರಗಳಂತೆ ವಿಶ್ವದರ್ಜೆಯ ನಗರವನ್ನಾಗಿ ಅಭಿವೃದ್ಧಿಪಡಿಸಲಾಗುವುದು' ಎಂದರು. ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

