ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಸಂಘರ್ಷ ಪರಿಸ್ಥಿತಿ ಹಿನ್ನೆಲೆ ಅಲ್ಲಿರುವ ತನ್ನ ನಾಗರಿಕರ ಸುರಕ್ಷತೆಯ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಪಶ್ಚಿಮ ಏಷ್ಯಾ ಪ್ರದೇಶದಾದ್ಯಂತ ವಾಯುಪ್ರದೇಶವನ್ನು ಭಾಗಶಃ ತೆರೆದ ನಂತರ 52,000ಕ್ಕೂ ಹೆಚ್ಚು ಭಾರತೀಯರು ದೇಶಕ್ಕೆ ಮರಳಿದ್ದಾರೆ ಎಂದು ಶನಿವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ವಿದೇಶಾಂಗ ಸಚಿವಾಲಯ(ಎಂಇಎ) ತಿಳಿಸಿದೆ.
ಸ್ಥಳೀಯ ಅಧಿಕಾರಿಗಳ ಮಾರ್ಗಸೂಚಿಗಳು ಮತ್ತು ಭಾರತೀಯ ಕಾರ್ಯಾಚರಣೆಯ ತಂಡ ನೀಡುವ ಸಲಹೆಗಳನ್ನು ಅನುಸರಿಸುವಂತೆ ಪಶ್ಚಿಮ ಏಷ್ಯಾ ದೇಶಗಳಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳನ್ನು ಅದು ಒತ್ತಾಯಿಸಿದೆ.
ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಕ್ಷೇಮವು ಸರ್ಕಾರದ ಆದ್ಯತೆಯಾಗಿದೆ. ಸಹಾಯದ ಅಗತ್ಯವಿರುವ ಎಲ್ಲರಿಗೂ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಆ ಪ್ರದೇಶದಾದ್ಯಂತದ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಎಂಇಎ ತಿಳಿಸಿದೆ.
ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ಬಾಂಬ್ ದಾಳಿ ಮುಂದುವರಿಸಿದ್ದು, ಪಶ್ಚಿಮ ಏಷ್ಯಾ ಪರಿಸ್ಥಿತಿ ಪ್ರಕ್ಷುಬ್ಧವಾಗಿಯೇ ಉಳಿದಿದೆ.
'ಭಾರತ ಸರ್ಕಾರವು ಪಶ್ಚಿಮ ಏಷ್ಯಾ ಮತ್ತು ಗಲ್ಫ್ ದೇಶದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ, ಅಲ್ಪಾವಧಿಯ ಪ್ರವಾಸಕ್ಕೆ ತೆರಳಿ ಅಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿದೆ'ಎಂದು ಎಂಇಎ ತಿಳಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಭಾರತೀಯ ಮಿಷನ್ ವಿವರವಾದ ಸಲಹೆಗಳನ್ನು ನೀಡಿದ್ದು, 24 ಗಂಟೆ ಸಹಾಯವಾಣಿ ತೆರೆದಿದೆ ಎಂದು ವರದಿ ತಿಳಿಸಿದೆ.
'ಕಳೆದ ಕೆಲವು ದಿನಗಳಲ್ಲಿ ಈ ಪ್ರದೇಶದಾದ್ಯಂತ ವಾಯುಪ್ರದೇಶವನ್ನು ಭಾಗಶಃ ತೆರೆದ ನಂತರ, ಭಾರತೀಯ ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳು ನಿಗದಿತ ವಿಮಾನಗಳನ್ನು ನಿರ್ವಹಿಸುತ್ತಿವೆ. ಇದು ಈ ದೇಶಗಳಿಗೆ ಅಲ್ಪಾವಧಿಯ ಪ್ರವಾಸಕ್ಕೆ ಬಂದಿದ್ದ ಭಾರತೀಯರನ್ನು ಕರತರಲು ಅನುವು ಮಾಡಿಕೊಡುತ್ತಿದೆ'ಎಂದು ಎಂಇಎ ತಿಳಿಸಿದೆ.
ಇದೀಗ, ಮಾರ್ಚ್ 1 ರಿಂದ 7ರವರೆಗೆ 52,000ಕ್ಕೂ ಹೆಚ್ಚು ಭಾರತೀಯರು ಗಲ್ಫ್ ದೇಶದಿಂದ ಭಾರತಕ್ಕೆ ಸುರಕ್ಷಿತವಾಗಿ ಪ್ರಯಾಣಿಸಿದ್ದಾರೆ. ಆ ಪೈಕಿ 32,107 ಜನರು ಭಾರತೀಯ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಅದು ತಿಳಿಸಿದೆ.

