HEALTH TIPS

5 ವಿಧಾನಸಭೆ ಅಖಾಡ ಸಜ್ಜು: ಬಂಗಾಳದಲ್ಲಿ ಎರಡು, ಉಳಿದೆಡೆ ಒಂದು ಹಂತದಲ್ಲಿ ಮತದಾನ

 ನವದೆಹಲಿ: ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಭಾನುವಾರ ಪ್ರಕಟಿಸಿದೆ. ಈ ಮೂಲಕ ಪಕ್ಷಗಳ ನಡುವಣ ಸ್ಪರ್ಧೆಗೆ ವೇದಿಕೆ ಸಜ್ಜಾಗಿದೆ.


ದೇಶದ ಸುಮಾರು 17 ಕೋಟಿ ಮತದಾರರನ್ನು ಪ್ರತಿನಿಧಿಸುವ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಗದ್ದುಗೆಗಾಗಿ ಹೋರಾಟ ಏರ್ಪಡಲಿದೆ.

2024ರ ಲೋಕಸಭಾ ಚುನಾವಣೆಯ ಬಳಿಕ ನಡೆಯುತ್ತಿರುವ ಬಹು ದೊಡ್ಡ ಪೈಪೋಟಿ ಇದು.

ಕೊಲ್ಲಿ ಯುದ್ಧದಿಂದಾಗಿ ವಿದೇಶಾಂಗ ನೀತಿಯ ಕಡು ಕಠಿಣ ಸವಾಲುಗಳನ್ನು ಪ್ರಧಾನಿ ನರೇಂದ್ರ ಮೋದಿ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಪಕ್ಷಕ್ಕೆ ನಿರ್ಣಾಯಕ ಹೋರಾಟವಿದು. ಪಶ್ಚಿಮ ಏಷ್ಯಾ ಸಂಘರ್ಷದ ಕಿಡಿಗಳು ಪರ್ಷಿಯನ್ ಕೊಲ್ಲಿಯನ್ನು ಮೀರಿ ಭಾರತದ ನೆಲದಲ್ಲಿ ಅಗಾಧ ಪರಿಣಾಮ ಸೃಷ್ಟಿಸಿದೆ. ಸ್ಥಳೀಯ ವಿಚಾರಗಳ ಜತೆಗೆ ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಅನಿಲ ಕೊರತೆಯಿಂದ ದೇಶದಲ್ಲಿ ಉಂಟಾಗಿರುವ ತಲ್ಲಣಗಳು ಬಿಜೆಪಿ ಪಾಲಿಗೆ ಬಹು ದೊಡ್ಡ ಸವಾಲು. ಬಿಜೆಪಿಗೆ ನಕಾರಾತ್ಮಕ ಆಗಬಹುದಾದ ಈ ಅಂಶವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಪ್ರಯತ್ನ ಆರಂಭಿಸಿವೆ. ಸಂಸತ್‌ ಅಧಿವೇಶನದ ಒಳಗೆ ಹಾಗೂ ಹೊರಗೆ ಗಟ್ಟಿ ಧ್ವನಿಯಲ್ಲಿ ಸರ್ಕಾರದ ವೈಫಲ್ಯವನ್ನು ಬೊಟ್ಟು ಮಾಡುತ್ತಿವೆ.

ಇಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, 'ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಹಾಗೂ ಉಳಿದ ರಾಜ್ಯಗಳಲ್ಲಿ ಒಂದೇ ಹಂತಗಳಲ್ಲಿ ಮತದಾನ ನಡೆಯಲಿದೆ. ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಎಲ್ಲ 824 ಸ್ಥಾನಗಳ ಮತ ಎಣಿಕೆ ಮೇ 4ರಂದು ಜರುಗಲಿದೆ' ಎಂದು ಹೇಳಿದರು. ಚುನಾವಣಾ ವೇಳಾಪಟ್ಟಿ ಘೋಷಣೆಯೊಂದಿಗೆ ಮಾದರಿ ನೀತಿ ಸಂಹಿತೆ ತಕ್ಷಣ ಜಾರಿಗೆ ಬಂದಿದೆ.

ಪಶ್ಚಿಮ ಬಂಗಾಳ, ಕೇರಳ ಹಾಗೂ ತಮಿಳುನಾಡಿನಲ್ಲಿ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಅಧಿಕಾರದಲ್ಲಿವೆ. ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ದಶಕದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಎಣಿಕೆಯಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೆಚ್ಚು ಕಡಿಮೆ ನೇರ ಸ್ಪರ್ಧಿಗಳು. ಮೂರನೇ ಪಕ್ಷ ಅಥವಾ ರಾಜಕೀಯ ಶಕ್ತಿ ಈ ರಾಜ್ಯದಲ್ಲಿ ಇನ್ನೂ ಬೆಳೆದು ನಿಂತಿಲ್ಲ.

ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಮಣಿಸಲು ಮೋದಿ- ಅಮಿತ್‌ ಶಾ ಜೋಡಿ ಮತ್ತೊಮ್ಮೆ ಶತಾಯಗತಾಯ ಪ್ರಯತ್ನ ನಡೆಸಲಿದೆ. ಮಹಿಳಾ ಮತಗಳ ಮೇಲೆ ಕಣ್ಣಿಟ್ಟು ಮಮತಾ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿವೆ. 'ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗಾದ ಅವಮಾನ'ದ ಸುತ್ತ ಚುನಾವಣಾ ವಿಷಯ ರೂಪಿಸಲು ಬಿಜೆಪಿ ಪ್ರಬಲ ಪ್ರಯತ್ನ ನಡೆಸುತ್ತಿದೆ.

ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಕೇಂದ್ರ ಬಿಂದು ಪಶ್ಚಿಮ ಬಂಗಾಳವೇ ಆಗಿರಲಿವೆ. ಕೇರಳ ಹಾಗೂ ಅಸ್ಸಾಂನಲ್ಲಿ ಕಾಂಗ್ರೆಸ್‌ ಪಕ್ಷವು ದಶಕದ ಬಳಿಕ ಕಮಾಲ್‌ ಮಾಡುವ ವಿಶ್ವಾಸದಲ್ಲಿದೆ. ಹರಿಯಾಣ ಹಾಗೂ ಮಹಾರಾಷ್ಟ್ರದಲ್ಲಿ ಕೊನೆಯ ಕ್ಷಣದಲ್ಲಿ ಎಡವಿದ ಕೈ ಪಾಳಯವು ಈ ಸಲ ಸ್ವಲ್ಪ ಎಚ್ಚರಿಕೆಯ ನಡೆ ಇಟ್ಟಿದೆ. ಅಸ್ಸಾಂನಲ್ಲಿ ಪ್ರಮುಖ ನಾಯಕರ ಪಕ್ಷಾಂತರ ಹಾಗೂ ಕೇರಳದಲ್ಲಿ ಪಕ್ಷದ ನಾಯಕರ ಆಂತರಿಕ ಕಚ್ಚಾಟವೇ ಕಾಂಗ್ರೆಸ್‌ಗೆ ತಲೆ ಬೇನೆಯಾಗಿದೆ.

ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್‌ ಆಧಿಪತ್ಯ ಮುಂದುವರಿಕೆಯ ತವಕದಲ್ಲಿವೆ. ದಕ್ಷಿಣ ರಾಜ್ಯದಲ್ಲಿ ಎಲ್ಲರ ಕಣ್ಣು ಇರುವುದು ಪ್ರಖ್ಯಾತ ಸಿನಿಮಾ ನಟ ವಿಜಯ್‌ ಮೇಲೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸ್ಥಾಪಿಸಿದ ವಿಜಯ್‌ ಸಭೆಗಳಿಗೆ ಭಾರಿ ಸಂಖ್ಯೆಗಳಲ್ಲಿ ಜನರು ಸೇರುತ್ತಿದ್ದಾರೆ. ಆದರೆ, ಈ ಅಲೆ ವಿಜಯ್‌ ಪರ ಮತವಾಗಿ ಪರಿವರ್ತನೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ದಕ್ಷಿಣದ ಇನ್ನೊಂದು ರಾಜ್ಯ ಕೇರಳದಲ್ಲಿ ಭಾರಿ ಪ್ರಯತ್ನದ ನಂತರವೂ ಬಿಜೆಪಿ ವರ್ಚಸ್ಸು ಹೆಚ್ಚಾದಂತಿಲ್ಲ. ಈಗಿನ ವಾತಾವರಣ ಗಮನಿಸಿದರೆ, 5ರಿಂದ 10 ಸ್ಥಾನಗಳನ್ನು ಗೆದ್ದರೆ ಬಿಜೆಪಿ ಪಾಲಿಗೆ ಬಲು ದೊಡ್ಡ ಸಾಧನೆ ಆಗಲಿದೆ.

ಕಮ್ಯುನಿಸ್ಟ್‌ ಪಕ್ಷಗಳ ಮೈತ್ರಿಕೂಟ ಎಲ್‌ಡಿಎಫ್ 2021ರಲ್ಲಿ ಸತತ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದು ಅಚ್ಚರಿ ಮೂಡಿಸಿತ್ತು. ಈ ಸಲವೂ ಅದೇ ಫಲಿತಾಂಶ ಪುನರಾವರ್ತಿಸುವ ವಿಶ್ವಾಸದಲ್ಲಿ ಮೈತ್ರಿಕೂಟ ಇದೆ. ಈ ಸಲ ಮೈತ್ರಿಕೂಟ ಸೋತರೆ, ದೇಶದ ಯಾವುದೇ ರಾಜ್ಯದಲ್ಲಿ ಕಮ್ಯುನಿಸ್ಟ್‌ ಪಕ್ಷದ ಸರ್ಕಾರ ಇಲ್ಲದಂತಾಗುತ್ತದೆ. ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಎಡ ಪಕ್ಷಗಳು ನಿಶ್ಶಕ್ತಗೊಂಡು ದಶಕವೇ ಕಳೆದಿದೆ.

ಪುದುಚೇರಿಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದಿಂದ ಸವಾಲು ಎದುರಿಸುತ್ತಿರುವ ಅಖಿಲ ಭಾರತ ಎನ್‌ಆರ್ ಕಾಂಗ್ರೆಸ್ ನಾಯಕ ಎನ್. ರಂಗಸಾಮಿ ಅವರು ಎನ್‌ಡಿಎ ಕೂಟವನ್ನು ಮುನ್ನಡೆಸಲಿದ್ದಾರೆ, ರಾಜ್ಯ ಮುಖ್ಯಮಂತ್ರಿಯಾಗಿ ಮರಳಿ ಅಧಿಕಾರ ವಹಿಸಿಕೊಳ್ಳಲು ಕಾತರರಾಗಿದ್ದಾರೆ.

ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಚುನಾವಣೆಯು 2027ರ ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ಇತರ ನಾಲ್ಕು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳ ಮೇಲೆ ಪರೋಕ್ಷ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು. 'ಇಂಡಿಯಾ' ಮೈತ್ರಿಕೂಟಕ್ಕೆ ಈ ಹಣಾಹಣಿ ಮಹತ್ವದ್ದಾಗಿದೆ. 2024ರ ಲೋಕಸಭಾ ಚುನಾವಣೆಯ ಬಳಿಕ ನಡೆದ ಬಹುತೇಕ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್‌ಗೆ ಈ ಚುನಾವಣೆ ಅಳಿವು ಉಳಿವಿನ ಹೋರಾಟ. ಈ ಚುನಾವಣೆಗಳಲ್ಲಿ ಸೋಲು ಎದುರಾದರೆ ಪಕ್ಷ ಭವಿಷ್ಯದಲ್ಲಿ ಮತ್ತೆ ತಲೆಯೆತ್ತುವುದು ಬಹಳ ಕಷ್ಟ. ಎನ್‌ಡಿಎ ಹಾಗೂ 'ಇಂಡಿಯಾ' ಮೈತ್ರಿಕೂಟಗಳು ಈ ಸುತ್ತಿನಲ್ಲಿ ಹೂಡುವ ತಂತ್ರ- ಪ್ರತಿತಂತ್ರಗಳನ್ನು ದೇಶ ಕುತೂಹಲದಿಂದ ಎದುರು ನೋಡತೊಡಗಿದೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries