HEALTH TIPS

ರಾಜ್ಯಸಭೆ ಚುನಾವಣೆ: ಮೂವರ ಗೆಲುವಿಗೆ ಬಿಜೆಪಿ ಕಸರತ್ತು

 ನವದೆಹಲಿ: ಬಿಹಾರ, ಹರಿಯಾಣ ಮತ್ತು ಒಡಿಶಾದಲ್ಲಿ ಸೋಮವಾರ ರಾಜ್ಯಸಭಾ ಚುನಾವಣೆಗಳು ನಡೆಯಲಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್‌ ರಾಜಕೀಯ ತಂತ್ರಗಳನ್ನು ಹೆಣೆದಿವೆ. 


ಕೇಸರಿ ಪಕ್ಷಕ್ಕೆ ಸಂಬಂಧಿಸಿದ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಮತ್ತು ಆರ್‌ಎಲ್‌ಎಂ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರನ್ನು ಬೆಂಬಲಿಸುವ ಮೂಲಕ ಮೂರು ಸ್ಥಾನಗಳಲ್ಲಿ ವಿರೋಧ ಪಕ್ಷದ ಗೆಲುವಿನ ಸಾಧ್ಯತೆಯನ್ನು ಕಡಿಮೆಗೊಳಿಸಲು ಎನ್‌ಡಿಎ ತಂತ್ರ ರೂಪಿಸಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರದಲ್ಲಿ ಈ ಮೂರು ರಾಜ್ಯಗಳಲ್ಲಿ ಅವರ ಗೆಲುವಿಗೆ ವಿರೋಧ ಪಕ್ಷದ ಕೆಲ ಸದಸ್ಯರ ಅಡ್ಡ ಮತದಾನದ ಅಗತ್ಯವಿದೆ.

ಅಡ್ಡ ಮತದಾನ ಅಥವಾ ಪಕ್ಷಾಂತರದ ಭಯದಿಂದ ಕಾಂಗ್ರೆಸ್‌, ಒಡಿಶಾದಲ್ಲಿನ ತನ್ನ 14 ಶಾಸಕರಲ್ಲಿ ಹೆಚ್ಚಿನವರನ್ನು ಬೆಂಗಳೂರಿಗೆ ಮತ್ತು ಹರಿಯಾಣದಲ್ಲಿನ 37 ಶಾಸಕರ ಪೈಕಿ 31 ಜನರನ್ನು ಹಿಮಾಚಲ ಪ್ರದೇಶಕ್ಕೆ ಸ್ಥಳಾಂತರಿಸಿದೆ.

ಈಗಾಗಲೇ ರಾಜ್ಯಸಭೆ ಚುನಾವಣೆಗೆ ಏಳು ರಾಜ್ಯಗಳಲ್ಲಿ 26 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಬಿಜೆಪಿಯ 7 ಮಂದಿ, ಕಾಂಗ್ರೆಸ್‌ನ ಐವರು, ತೃಣಮೂಲ ಕಾಂಗ್ರೆಸ್‌ನ ನಾಲ್ವರು, ಡಿಎಂಕೆಯ ಮೂವರು, ಶಿವಸೇನಾ, ಆರ್‌ಪಿಐ (ಎ), ಎನ್‌ಸಿಪಿ, ಎನ್‌ಸಿಪಿ (ಎಸ್‌ಪಿ), ಎಐಎಡಿಎಂಕೆ, ಪಿಎಂಕೆ ಮತ್ತು ಯುಪಿಪಿಎಲ್‌ನ ತಲಾ ಒಬ್ಬರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಒಡಿಶಾ ಕಾಂಗ್ರೆಸ್‌ ಶಾಸಕ ನಾಪತ್ತೆ: ಒಡಿಶಾದ ಕಾಂಗ್ರೆಸ್ ಶಾಸಕ ದಶರಥಿ ಗಮಾಂಗ್‌ ನಾಪತ್ತೆಯಾಗಿರುವುದು, ಕಾಂಗ್ರೆಸ್‌ನಲ್ಲಿ ತಳಮಳ ಉಂಟುಮಾಡಿದೆ. ಈಗಾಗಲೇ ಪಕ್ಷ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿದೆ. ಅದರ ಜತೆಗೆ ಕಾಂಗ್ರೆಸ್‌ ಶಾಸಕಿ ಸೋಫಿಯಾ ಫಿರ್ದೌಸ್‌ ಅವರೂ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದಾರೆ.

'ಬಿಜೆಪಿಯ ಬಿ-ಟೀಂ ನಂತಿರುವ ಬಿಜೆಡಿ ಜತೆ ಕಾಂಗ್ರೆಸ್‌ ಕೈಜೋಡಿಸಿರುವುದು ನೋವು ಉಂಟುಮಾಡಿದೆ. ಅಲ್ಲದೆ, ಚುನಾವಣಾ ಸಿದ್ಧತೆಗಳಿಂದ ನನ್ನನ್ನು ಹೊರಗಿಡಲಾಗಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಒಡಿಶಾದಲ್ಲಿ ಮನಮೋಹನ್‌ ಸಮಲ್‌ ಮತ್ತು ಸುಜೀತ್‌ ಕುಮಾರ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಎಸ್‌. ಮಿಶ್ರಾ ಅವರನ್ನು ಬಿಜೆಡಿ ಅಭ್ಯರ್ಥಿಯನ್ನಾಗಿಸಿದೆ. ಅಲ್ಲದೆ, ಕಾಂಗ್ರೆಸ್‌ ಜತೆಗೂಡಿ ಬಿಜೆಡಿಯು ಪಕ್ಷವು ದತ್ತೇಶ್ವರ ಹೋಟಾ ಅವರನ್ನು ಬೆಂಬಲಿಸಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಸಚಿವ ದಿಲೀಪ್‌ ರಾಯ್‌ ಅವರು ಕಣದಲ್ಲಿದ್ದಾರೆ. ಬಿಜೆಪಿಯ ಇಬ್ಬರು, ಬಿಜೆಡಿಯ ಒಬ್ಬರ ಗೆಲುವು ನಿಶ್ಚಿತವಾಗಿದೆ. ಆದರೆ ಹೋಟಾ ಗೆಲುವು ಅನಿಶ್ಚಿತವಾಗಿದೆ.

ಬಿಹಾರದಲ್ಲಿ ಕುಶ್ವಾಹ-ಸಿಂಗ್‌ ನಡುವೆ ಪೈಪೋಟಿ: ಬಿಹಾರದಲ್ಲಿ ನಡೆಯುವ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಬಿಜೆಪಿ ಅಧ್ಯಕ್ಷ ನಿತಿನ್‌ ನವೀನ್‌, ಕೇಂದ್ರ ಸಚಿವ ರಾಮ್‌ನಾಥ್‌ ಠಾಕೂರ್‌ (ಜೆಡಿಯು) ಮತ್ತು ಬಿಜೆಪಿ ಶಿವೇಶ್‌ ಕುಮಾರ್‌ ರಾಜ್ಯಸಭೆ ಪ್ರವೇಶಿಸುವುದು ಖಚಿತವಾಗಿದೆ. ಆದರೆ ಆರ್‌ಎಲ್‌ಎಂನ ಉಪೇಂದ್ರ ಕುಶ್ವಾಹ ಅವರ ಆಯ್ಕೆಗೆ ಅಗತ್ಯವಿರುವ 41 ಮೊದಲ ಪ್ರಾಶಸ್ತ್ಯದ ಮತಗಳು ಎನ್‌ಡಿಎ ಬಳಿಯಿಲ್ಲ. ಅದಕ್ಕೆ ಮೂರು ಮತಗಳ ಕೊರತೆಯಿದೆ. ಇದಕ್ಕಾಗಿ ಅಡ್ಡ ಮತದಾನ ಅಥವಾ ಎರಡನೇ ಪ್ರಾಶಸ್ತ್ಯ ಮತಗಳನ್ನು ಅವಲಂಬಿಸಬೇಕಾಗಿದೆ.

'ಇಂಡಿಯಾ' ಬಣವು ಆರ್‌ಜೆಡಿ ಸಂಸದ ಎ.ಡಿ.ಸಿಂಗ್‌ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಸಿದೆ. ಆದರೆ ಇವರ ಗೆಲುವಿಗೆ ಆರು ಮತಗಳ ಕೊರತೆಯಿದೆ. ಹೀಗಾಗಿ ಅದು ಎಐಎಂಐಎಂ ಪಕ್ಷದ ಐವರು ಶಾಸಕರು ಮತ್ತು ಬಿಎಸ್‌ಪಿಯ ಒಬ್ಬರು ಶಾಸಕರನ್ನು ಅವಲಂಬಿಸಿದೆ.

'ಕುಶ್ವಾಹ ಅವರ ಗೆಲುವಿನ ಬಗ್ಗೆ ಎನ್‌ಡಿಎ ವಿಶ್ವಾಸ ವ್ಯಕ್ತಪಡಿಸಿದ್ದು, ಅವರು ಗೆಲ್ಲಲು ಬೇಕಿರುವಷ್ಟು ಮತಗಳ ಮೌಲ್ಯ ತಮ್ಮಲ್ಲಿದೆ' ಎಂದು ಹೇಳಿದೆ. ಅಲ್ಲದೆ ಕಾಂಗ್ರೆಸ್‌ನ ಆರು ಶಾಸಕರಲ್ಲಿ ಕೆಲವರು ಅಡ್ಡ ಮತದಾನ ಮಾಡುವ ಸಾಧ್ಯತೆಯಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಹರಿಯಾಣ- ಕರಮ್‌ವೀರ್‌ಗೆ ನಂದಲ್‌ ಸ್ಪರ್ಧೆ: ಹರಿಯಾಣದಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಸಂಸದ ಸಂಜಯ್‌ ಭಾಟಿಯಾ (ಕೇಂದ್ರ ಸಚಿವ ಎಂ.ಎಲ್‌.ಖಟ್ಟರ್‌ ಆಪ್ತ) ಗೆಲುವು ಖಚಿತವಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಕರಮ್‌ವೀರ್‌ ಬೌಧ್‌ ಅವರನ್ನು ಆಯ್ಕೆ ಮಾಡಲು ಅಗತ್ಯವಿರುವಷ್ಟು ಸಂಖ್ಯೆಯೂ ಕಾಂಗ್ರೆಸ್‌ ಬಳಿಯಿದೆ. ಆದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿಜೆಪಿ ನಾಯಕ ಸತೀಶ್‌ ನಂದಲ್‌ ಅವರು ಕರಮ್‌ವೀರ್‌ ಅವರಿಗೆ ತೀವ್ರ ಸ್ಪರ್ಧೆಯೊಡ್ಡಿದ್ದಾರೆ. ಹೀಗಾಗಿ ಶಾಸಕರ ಖರೀದಿ ಆತಂಕದಿಂದ ಕಾಂಗ್ರೆಸ್‌ ತನ್ನ 31 ಶಾಸಕರನ್ನು ಹಿಮಾಚಲ ಪ್ರದೇಶಕ್ಕೆ ಕಳುಹಿಸಿದೆ.

ಹರಿಯಾಣದಲ್ಲಿ ಮೂವರು ಸ್ವತಂತ್ರ ಶಾಸಕರ ಬೆಂಬಲದ ಜತೆಗೆ ಬಿಜೆಪಿ 48 ಶಾಸಕರನ್ನು ಹೊಂದಿದೆ. ಒಬ್ಬ ಅಭ್ಯರ್ಥಿ ಗೆಲುವಿಗೆ ಬೇಕಿರುವ ಮೊದಲ ಪ್ರಾಶಸ್ತ್ಯದ ಮತಗಳ ಬಳಿಕ, ಉಳಿಯುವ ಹೆಚ್ಚುವರಿ ಮತಗಳನ್ನು ನಂದಲ್‌ ಅವರ ಕಡೆಗೆ ತಿರುಗಿಸಲು ಪಕ್ಷ ಯೋಜಿಸಿದೆ. ಇದರ ನಡುವೆ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಬಗ್ಗೆ ಬೇಸರಗೊಂಡಿರುವ ಆ ಪಕ್ಷದ ಶಾಸಕರ ಅಡ್ಡಮತದಾನದ ನಿರೀಕ್ಷೆಯನ್ನೂ ಬಿಜೆಪಿ ಹೊಂದಿದೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries