ನವದೆಹಲಿ: ತಮ್ಮನ್ನು ವಜಾಗೊಳಿಸುವಂತೆ ಒತ್ತಾಯಿಸಿ ಸಂಸತ್ತಿನಲ್ಲಿ ನಿಲುವಳಿ ಮಂಡನೆಗೆ ವಿರೋಧ ಪಕ್ಷಗಳು ನೀಡಿದ್ದ ನೋಟಿಸ್ ಕುರಿತು ಉತ್ತರಿಸಲು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಭಾನುವಾರ ನಿರಾಕರಿಸಿದ್ದಾರೆ.
ನಾಲ್ಕು ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಸಲು ಕರೆದಿದ್ದಪತ್ರಿಕಾಗೋಷ್ಠಿಯಲ್ಲಿ ಅವರು, ಪತ್ರಕರ್ತರ ಈ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.
ಮುಖ್ಯ ಚುನಾವಣಾ ಆಯುಕ್ತರನ್ನು(ಸಿಇಸಿ) ಸಂಸತ್ತು ಮಾತ್ರ ವಜಾಗೊಳಿಸಬಹುದಾಗಿದ್ದು, ಚುನಾವಣಾ ಆಯುಕ್ತರನ್ನು ಮುಖ್ಯ ಚುನಾವಣಾ ಆಯುಕ್ತರು ರಾಷ್ಟ್ರಪತಿಗೆ ಶಿಫಾರಸು ಮಾಡುವ ಮೂಲಕ ಹುದ್ದೆಯಿಂದ ಕೆಳಗಿಳಿಸಬಹುದಾಗಿದೆ.
ಜ್ಞಾನೇಶ್ ಕುಮಾರ್ ಅವರನ್ನು ಸಿಇಸಿ ಹುದ್ದೆಯಿಂದ ವಜಾಗೊಳಿಸುವ ಕುರಿತಂತೆ ನಿಲುವಳಿ ಮಂಡಿಸಲು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ವಿರೋಧ ಪಕ್ಷಗಳು ನೋಟಿಸ್ ಸಲ್ಲಿಸಿವೆ, ಅವರ ವಿರುದ್ಧ ಪಕ್ಷಪಾತದ ವರ್ತನೆಯ ಆರೋಪವನ್ನು ವಿರೋಧ ಪಕ್ಷಗಳು ಮಾಡಿವೆ.
ಆಡಳಿತಾರೂಢ ಬಿಜೆಪಿಗೆ ಸಿಇಸಿ ಹಲವು ಸಂದರ್ಭಗಳಲ್ಲಿ ಸಹಾಯ ಮಾಡಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಅದರಲ್ಲೂ ವಿಶೇಷವಾಗಿ, ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್‌ಐಆರ್) ಸಮಯದಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಿಇಸಿಯನ್ನು ಹುದ್ದೆಯಿಂದ ತೆಗೆದುಹಾಕುವ ಪ್ರಕ್ರಿಯೆಯು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಪದಚ್ಯುತಗೊಳಿಸಲು ಬಳಸುವ ಪ್ರಕ್ರಿಯೆಯಂತೆ ಇರುತ್ತದೆ.

