ಚೆನ್ನೈ: ವೀಣಾ ವಾದಕಿ ಜಯಂತಿ ಕುಮರೇಶ್ ಅವರು ಮದ್ರಾಸ್ ಮ್ಯೂಸಿಕ್ ಅಕಾಡೆಮಿ ನೀಡುವ ಪ್ರತಿಷ್ಠಿತ 'ಸಂಗೀತ ಕಲಾನಿಧಿ' ಪ್ರಶಸ್ತಿಗೆ ಭಾಜನರಾಗಿದ್ದಾರೆ.
'ಸರಸ್ವತಿ ವೀಣೆಯಲ್ಲಿನ ಪಾಂಡಿತ್ಯಕ್ಕಾಗಿ ಮತ್ತು ಕರ್ನಾಟಕ ಸಂಗೀತವನ್ನು ಯುವ ಜನರೆಡೆಗೆ ಕೊಂಡೊಯ್ಯುವಲ್ಲಿನ ಹೊಸ ಆಲೋಚನೆಗಳಿಗಾಗಿ ಜಯಂತಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ' ಎಂದು ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಅಧ್ಯಕ್ಷ ಎನ್.ಮುರಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
57 ವರ್ಷದ ಜಯಂತಿ ಅವರು ದಿವಂಗತ ಉಸ್ತಾದ್ ಜಾಕೀರ್ ಹುಸೇನ್ ಸೇರಿದಂತೆ ಹಲವು ಪ್ರಮುಖ ಕಲಾವಿದರ ಜತೆ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.
ಸುಗಂಧಾ ಕಲಾಮೇಘಂ ಮತ್ತು ಮೃದಂಗ ವಾದಕ ತ್ರಿಚೂರ್ ಸಿ.ನರೇಂದ್ರನ್ ಅವರನ್ನು 'ಸಂಗೀತ ಕಲಾ ಆಚಾರ್ಯ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸುಗಂಧಾ ಅವರು ಸಂಗೀತ ಕಲಾ ಆಚಾರ್ಯ ಆರ್. ವೆಂಕಟರಾಮನ್ ಅವರಿಂದ ವೀಣಾ ವಾದನ ಕಲಿತಿರುವುದರ ಜತೆಗೆ, ನವದೆಹಲಿಯ ಗಾಂಧರ್ವ ಮಹಾ ವಿದ್ಯಾಲಯದಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ.
ನರೇಂದ್ರನ್ ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದು, ಹಲವು ಮಂದಿಗೆ ತರಬೇತಿ ನೀಡಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯೆಗೊ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎರಡು ವರ್ಷ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ.

