ಆರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, 'ಲಾಕ್‌ಡೌನ್' ಘೋಷಿಸಿದ್ದರು. ಇದಾಗಿ ಸರಿಯಾಗಿ ಆರು ವರ್ಷಗಳ ನಂತರ ಪಶ್ಚಿಮ ಏಷ್ಯಾದ ಯುದ್ಧಕಾಲದ ಸಂದರ್ಭದಲ್ಲಿ ಮತ್ತೆ ಕೊರೊನಾ ದಿನಗಳನ್ನು ನೆನಪಿಸಿಕೊಂಡಿದ್ದು ಕುತೂಹಲ ಮೂಡಿಸಿದೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಲಾಕ್‌ಡೌನ್ ಜಾರಿಗೆ ಇಂದು 6 ವರ್ಷ: ಈಗೇಕೆ ಪ್ರಧಾನಿ ಮೋದಿಯಿಂದ ಕೋವಿಡ್ ಜಪ..?
ಒಂದು ಸಾಲಿನಲ್ಲಿಪಶ್ಚಿಮ ಏಷ್ಯಾದ ಅಸ್ಥಿರತೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಆರು ವರ್ಷಗಳ ಹಿಂದಿನ ಲಾಕ್‌ಡೌನ್ ಸಂಕಷ್ಟವನ್ನು ನೆನಪಿಸಿ, ದೇಶದ ಆರ್ಥಿಕ ಭದ್ರತೆಗೆ ಸಜ್ಜಾಗುವಂತೆ ಕರೆ ನೀಡಿದ್ದಾರೆ.ಪ್ರಮುಖ ಅಂಶಗಳು• ಕೋವಿಡ್ ನೆನಪು ಮತ್ತು ಎಚ್ಚರಿಕೆಆರು ವರ್ಷಗಳ ಹಿಂದೆ ಘೋಷಿಸಿದ ಲಾಕ್‌ಡೌನ್ ಸಮಯದ ಒಗ್ಗಟ್ಟನ್ನು ಪ್ರಧಾನಿ ನೆನಪಿಸಿದ್ದು, ಯುದ್ಧದ ಕಾಲದ ಆರ್ಥಿಕ ಸವಾಲುಗಳನ್ನು ಎದುರಿಸಲು ಸಿದ್ಧರಾಗುವಂತೆ ದೇಶಕ್ಕೆ ಕರೆ ನೀಡಿದ್ದಾರೆ.• ಜಾಗತಿಕ ಯುದ್ಧದ ಆರ್ಥಿಕ ಹೊಡೆತಪಶ್ಚಿಮ ಏಷ್ಯಾದ ಸಂಘರ್ಷವು ಕೇವಲ ಕ್ಷಿಪಣಿ ಸಮರವಾಗಿ ಉಳಿಯದೆ, ಅಡುಗೆ ಅನಿಲ, ಚಿನ್ನದ ಬೆಲೆ ಮತ್ತು ಮುದ್ರಣ ಮಾಧ್ಯಮದಂತಹ ಉದ್ಯಮಗಳ ಮೇಲೆ ನೇರ ಪರಿಣಾಮ ಬೀರಿದೆ.• ಇಂಧನ ಭದ್ರತೆಯ ಆತಂಕಭಾರತದ ತೈಲ ಆಮದಿನ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯಲ್ಲಿನ ಅಸ್ಥಿರತೆಯು ದೇಶದ ಇಂಧನ ಪೂರೈಕೆ ಮತ್ತು ಬೆಲೆ ಏರಿಕೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು.• ಆಹಾರ ಮತ್ತು ಗೊಬ್ಬರ ಸಬ್ಸಿಡಿಕೋವಿಡ್ ಸಮಯದಲ್ಲಿ ಯೂರಿಯಾ ಬೆಲೆ ಏರಿಕೆಯಾದಾಗ ಸರ್ಕಾರ ಬೆಲೆಯನ್ನು ಸ್ಥಿರಗೊಳಿಸಿದ್ದನ್ನು ಸ್ಮರಿಸಿದ ಪ್ರಧಾನಿ, ರೈತರಿಗೆ ಮತ್ತು ಅಹಾರ ಭದ್ರತೆಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.• ಭಾರತದ ರಾಜತಾಂತ್ರಿಕ ನಿಲುವುಯುದ್ಧದ ಸಂದರ್ಭದಲ್ಲಿ ಭಾರತವು ಯಾವುದೇ ಪಕ್ಷ ವಹಿಸದೆ, ಶಾಂತಿ ಮತ್ತು ಮಾತುಕತೆಯ ಹಳೆಯ ಅಲಿಪ್ತ ನೀತಿಯನ್ನು ಮುಂದುವರಿಸುತ್ತಾ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಮುಂದಾಗಿದೆ.• ಭವಿಷ್ಯದ ಸವಾಲುಗಳುಇಂಧನ ಸಂಗ್ರಹ ಹೆಚ್ಚಿಸುವುದು, ನಾಗರಿಕ ಸರಬರಾಜು ಸ್ಥಿರಗೊಳಿಸುವುದು ಮತ್ತು ಜಾಗತಿಕ ಆರ್ಥಿಕ ಅಸ್ಥಿರತೆಯ ನಡುವೆ ಆರ್ಥಿಕತೆಯನ್ನು ಚೇತರಿಸಿಕೊಳ್ಳುವಂತೆ ಮಾಡುವುದು ಈಗಿನ ತುರ್ತು ಜವಾಬ್ದಾರಿಯಾಗಿದೆ.ಪ್ರಮುಖ ಅಂಕಿಅಂಶಗಳು2020ರ ಮಾರ್ಚ್ 24ಲಾಕ್‌ಡೌನ್ ಘೋಷಿಸಿದ ದಿನಾಂಕ21 ದಿನಗಳುಅಂದಿನ ಲಾಕ್‌ಡೌನ್ ಅವಧಿ₹3 ಸಾವಿರಕೋವಿಡ್ ವೇಳೆ ಯೂರಿಯಾ ಪ್ರತಿ ಕ್ವಿಂಟಾಲ್ ಬೆಲೆ₹300ಸರ್ಕಾರ ಸ್ಥಿರಗೊಳಿಸಿದ ರಸಗೊಬ್ಬರ ಬೆಲೆ53 ಲಕ್ಷ ಟನ್‌ದೇಶದಲ್ಲಿರುವ ತೈಲ ದಾಸ್ತಾನುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
2020ರ ಮಾರ್ಚ್ 24, ಅಂದರೆ ಇಂದಿಗೆ ಸರಿಯಾಗಿ ಆರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ದೂರದರ್ಶನ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, 'ಲಾಕ್‌ಡೌನ್' ಘೋಷಿಸಿದ್ದರು. ಇದಾಗಿ ಸರಿಯಾಗಿ ಆರು ವರ್ಷಗಳ ನಂತರ ಪಶ್ಚಿಮ ಏಷ್ಯಾದಲ್ಲಿ ನಡೆದಿರುವ ಯುದ್ಧಕಾಲದ ಸಂದರ್ಭದಲ್ಲಿ ಮತ್ತೆ ಕೊರೊನಾ ದಿನಗಳನ್ನು ನೆನಪಿಸಿಕೊಂಡಿರುವ ಪ್ರಧಾನಿ, 'ಸನ್ನದ್ಧ'ರಾಗುವಂತೆ ದೇಶವನ್ನು ಎಚ್ಚರಿಸಿದ್ದಾರೆ.
ಆಗ 21 ದಿನಗಳ ಲಾಕ್‌ಡೌನ್ ಅನ್ನು ಪ್ರಧಾನಿ ಘೋಷಿಸಿದ್ದರು. ಈಗಲೂ ಆಗ ಜನತೆ ತೋರಿದ್ದ ಒಗ್ಗಟ್ಟು ಹಾಗೂ ನೀಡಿದ ಸಹಕಾರವನ್ನೇ ಅವರು ಕೋರಿದ್ದಾರೆ. ಯುದ್ಧದ ಪರಿಸ್ಥಿತಿಯಲ್ಲಿ ದೇಶದ ಆಹಾರ ಭದ್ರತೆ ಮತ್ತು ರೈತರಿಗೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಮಾತುಗಳನ್ನಾಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಯೂರಿಯಾ ರಸಗೊಬ್ಬರ ಬೆಲೆ ಪ್ರತಿ ಕ್ವಿಂಟಾಲ್‌ಗೆ ₹3 ಸಾವಿರಕ್ಕೆ ಏರಿಕೆಯಾದಾಗ, ಸರ್ಕಾರವು ಅದನ್ನು ₹300ಕ್ಕೆ ಬೆಲೆ ಸ್ಥಿರಗೊಳಿಸಿದ್ದನ್ನು ಪ್ರಧಾನಿ ನೆನಪಿಸಿಕೊಂಡಿದ್ದಾರೆ. ಅಂಥದ್ದೇ ಸವಾಲಿಗೆ ಮತ್ತೆ ಈಗ ಭಾರತ ಸಿದ್ಧವಾಗಬೇಕಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಕ್ಷಿಪಣಿಗಳ ಸಮರವಲ್ಲ ಆರ್ಥಿಕ ಸಂಘರ್ಷ
ಇರಾನ್ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿರುವ ಯುದ್ಧವು ಕೇಲವ ಕ್ಷಿಪಣಿ, ಡ್ರೋನ್ ಹಾಗೂ ಸೈನಿಕರ ನಡುವಿನ ಸಮರವಾಗಷ್ಟೇ ಉಳಿದಿಲ್ಲ. ಅದು ಆರ್ಥಿಕತೆ, ಇಂಧನ ಭದ್ರತೆ ಮತ್ತು ಜಾಗತಿಕ ರಾಜಕೀಯ ಸಮೀಕರಣಗಳನ್ನು ತಲೆಕೆಳಗಾಗಿಸಿರುವುದೂ ಅಷ್ಟೇ ಸತ್ಯ. ಭಾರತದಲ್ಲಿ ಅಡುಗೆ ಅನಿಲದ ಬಿಸಿ ತಟ್ಟಿದೆ. ಚಿನ್ನದ ಬೆಲೆ ಕುಸಿದಿದೆ. ಮುದ್ರಣ ಮಾಧ್ಯಮ ಸಹಿತ ಹಲವು ಉದ್ಯಮಗಳಿಗೆ ಯುದ್ಧದ ಕಾವು ತಟ್ಟಿದೆ. ಈ ಸಂದರ್ಭದಲ್ಲೇ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಾಡಿದ ಭಾಷಣವು ಜನರ ಚಿಂತೆಗೀಡು ಮಾಡಿದೆ. ಬರಲಿರುವ ದಿನಗಳ ಇನ್ನೇನು ಸಂಕಷ್ಟ ತರಲಿದೆಯೋ ಎಂಬ ಆತಂಕ ಮನೆ ಮಾಡಿದೆ.
ಕೋವಿಡ್-19ರ ಸಂದರ್ಭದಲ್ಲಿ ದೇಶದಲ್ಲಿ ಎದುರಾದ ಸಂಕಷ್ಟವನ್ನೇ ಈಗಿನ ಯುದ್ಧದ ಪರಿಸ್ಥಿತಿಗೆ ಪ್ರಧಾನಿ ಅವರು ಹೋಲಿಕೆ ಮಾಡಿದ್ದಾರೆ. ಇದಕ್ಕೆ ಕಾರಣ ಇರಾನ್ ಮೇಲೆ ಅಮೆರಿಕಾ-ಇಸ್ರೇಲ್ ದಾಳಿಯ ನಂತರ ಪ್ರಾರಂಭವಾದ ಸಂಘರ್ಷವು ಜಾಗತಿಕ ಸರಕು ಸಾಗಣೆ, ಇಂಧನ ಸರಬರಾಜು ಮತ್ತು ವ್ಯಾಪಾರ ಮಾರ್ಗಗಳ ಮೇಲೆ ಬೀರಿರುವ ಗಂಭೀರ ಪರಿಣಾಮ. ವಿಶೇಷವಾಗಿ ಹೋರ್ಮುಜ್ ಜಲಸಂಧಿ ಎಂಬ ಪ್ರಮುಖ ಮಾರ್ಗದಲ್ಲಿ ಉಂಟಾದ ಅಸ್ಥಿರತೆ ಭಾರತಕ್ಕೆ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ಭಾರತದ ತೈಲ ಆಮದುಗಳ ದೊಡ್ಡ ಭಾಗ ಇದೇ ಮಾರ್ಗದಿಂದ ಬರುತ್ತದೆ. ಇದು ಕೇವಲ ವಿದೇಶಾಂಗ ಸಮಸ್ಯೆಯಾಗಿ ಉಳಿಯದೇ ನೇರವಾಗಿ ನಮ್ಮ ಆರ್ಥಿಕತೆ ಮತ್ತು ದಿನನಿತ್ಯದ ಜೀವನದ ಮೇಲೂ ಪರಿಣಾಮ ಬೀರುತ್ತಿರುವುದನ್ನು ಅವರ ಭಾಷಣ ಪ್ರತಿಬಿಂಬಿಸಿದೆ.
ಕೋವಿಡ್ ಸಮಯವನ್ನು ಇಡೀ ದೇಶವು ಹೇಗೆ ಒಗ್ಗಟ್ಟಿನಿಂದ ಎದುರಿಸಿದೆವೋ ಈಗಲೂ ಅದೇ ಸಿದ್ಧತೆ ಅಗತ್ಯ ಎಂಬ ಸಂದೇಶವನ್ನು ಅವರು ತಮ್ಮ ಭಾಷಣದಲ್ಲಿ ನೀಡಿದ್ದಾರೆ. ಆರು ವರ್ಷಗಳ ಹಿಂದಿನ ಆ ದಿನವನ್ನು ನೆನಪಿಸಿಕೊಂಡರೆ ಬಿಕೋ ಎನ್ನುವ ರಸ್ತೆಗಳು, ಸಿಗದ ಅಗತ್ಯ ವಸ್ತುಗಳು, ಆರೋಗ್ಯ ವ್ಯವಸ್ಥೆಯಲ್ಲಿ ಸೃಷ್ಟಿಯಾದ ಒತ್ತಡ, ಆರ್ಥಿಕ ಕುಸಿತ ಎಲ್ಲವೂ ಕಣ್ಣೆದುರು ಹಾದುಹೋಗುತ್ತದೆ. ಅದೇ ರೀತಿಯಲ್ಲಿ ಬಹುಮುಖ ಪರಿಣಾಮವನ್ನು ಯುದ್ಧವೂ ತರಬಹುದು ಎಂಬುದರ ಸೂಚನೆಯೇ ಎಂಬುದು ಸಾರ್ವಜನಿಕ ವಲಯದಲ್ಲಿ ಸಾಮಾನ್ಯವಾಗಿರುವ ಚರ್ಚೆಯಾಗಿದೆ.
ಇಂಧನ, ವ್ಯಾಪಾರ, ಉದ್ಯೋಗ...
ಪಶ್ಚಿಮ ಏಷ್ಯಾ ಎಂಬುದು ಭೌಗೋಳಿಕವಾಗಿ ಭಾರತದಿಂದ ದೂರವಿರುವ ಪ್ರದೇಶವೇನೋ ಹೌದು. ಆದರೆ ಅದು ಇಂಧನದ ಪ್ರಮುಖ ಮೂಲವಾಗಿದೆ. ವ್ಯಾಪಾರದ ಪ್ರಮುಖ ಮಾರ್ಗವಾಗಿದೆ. ಲಕ್ಷಾಂತರ ಭಾರತೀಯರಿಗೆಯ ಉದ್ಯೋಗ ನೀಡಿರುವ ಕೇಂದ್ರವೂ ಹೌದು. ಈ ಎಲ್ಲಾ ವಿಷಯಗಳ ಹಿನ್ನೆಲೆಯಲ್ಲಿ ಯುದ್ಧದ ಪರಿಣಾಮಗಳು ಭಾರತಕ್ಕೆ ಬಹಳಷ್ಟು ಸವಾಲುಗಳನ್ನು ಉಂಟುಮಾಡಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.
ದೇಶದಲ್ಲಿ 53 ಲಕ್ಷ ಟನ್ ತೈಲ ದಾಸ್ತಾನು ಇದೆ ಎಂದು ಪ್ರಧಾನಿ ಮೋದಿ ಅವರು ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ಇನ್ನೂ ಎರಡು ತೈಲ ತುಂಬಿದ ಹಡಗುಗಳು ದಾಟಿದವು ಎಂಬ ಶುಭಸುದ್ದಿಯೂ ವರದಿಯಾಗಿದೆ. ಇದರ ನಡುವೆ ಇಂಧನ ಸಂಗ್ರಹ ಹೆಚ್ಚಿಸುವುದು, ನಾಗರಿಕ ಸರಬರಾಜು ಸ್ಥಿರವಾಗಿರುವಂತೆ ನೋಡಿಕೊಳ್ಳುವುದು, ನಾಗರಿಕರ ಭದ್ರತೆ ಖಾತ್ರಿಪಡಿಸುವುದು ಒಳಗೊಂಡು ಆರ್ಥಿಕತೆ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿ ಈಗ ದೇಶದ ಮೇಲಿದೆ.
ಅಲಿಪ್ತ ರಾಷ್ಟ್ರ ಎಂದು ಹಿಂದೆ ಹೇಳಿಕೊಂಡಿದ್ದ ಭಾರತವು ಈಗಲೂ ಯಾರ ಪಕ್ಷದಲ್ಲೂ ಇಲ್ಲದೆ, ಕೇವಲ ಶಾಂತಿಯ ಪರವಾಗಿದ್ದು ರಾಜತಾಂತ್ರಿಕ ಸಮತೋಲನವನ್ನು ಕಾಪಾಡಿಕೊಂಡು ತನ್ನ ಹಳೆಯ ನೀತಿಯನ್ನೇ ಮುಂದುವರಿಸಿದೆ. ಯಾರನ್ನೂ ಸ್ಪಷ್ಟವಾಗಿ ಬೆಂಬಲಿಸದೇ, ಶಾಂತಿ ಮತ್ತು ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಕೊಳ್ಳಲು ಒತ್ತು ನೀಡುತ್ತಿದೆ. ಒಂದೆಡೆ ಇಸ್ರೇಲ್ ಮತ್ತು ಅಮೆರಿಕ, ಮತ್ತೊಂದೆಡೆ ಇರಾನ್ ಮತ್ತು ಕೊಲ್ಲಿ ರಾಷ್ಟ್ರಗಳು. ಇಂಥ ಸಂದರ್ಭದಲ್ಲಿ ಭಾರತವು ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬೇಕಿದೆ ಎಂದೆನ್ನುತ್ತಾರೆ ತಜ್ಞರು.
ಕೋವಿಡ್ ಕಾಲ ನೆನಪಿಸಿದ ಪ್ರಧಾನಿ ಸಂದೇಶ
ಆರು ವರ್ಷಗಳ ಹಿಂದೆ ಕೋವಿಡ್ ಕಲಿಸಿದ ಮೂರು ಪಾಠಗಳು ಇಂದಿಗೂ ಜನಮಾನಸದಲ್ಲಿ ಹಸಿರಾಗಿದೆ. ಸಂಕಷ್ಟ ಬರುವ ಮೊದಲು ಪರಿಸ್ಥಿತಿ ಎದುರಿಸಲು ಸಜ್ಜಾಗಿರುವುದು, ಸರ್ಕಾರ ಮಾತ್ರವಲ್ಲದೆ ಜನರೂ ಒಗ್ಗಟ್ಟು ಪ್ರದರ್ಶಿಸಿ ಪರಿಸ್ಥಿತಿ ಎದುರಿಸಲು ಸಹಕರಿಸುವುದು ಹಾಗೂ ಸಂಕಷ್ಟಗಳು ತಾತ್ಕಾಲಿಕ, ಆದರೆ ಪರಿಣಾಮ ದೀರ್ಘಕಾಲೀನ ಎಂಬ ತತ್ವದೊಂದಿಗೆ ತಾಳ್ಮೆ ಮತ್ತು ದೂರದೃಷ್ಟಿ ಮೂಲಕ ಪರಿಸ್ಥಿತಿಯನ್ನು ಎದುರಿಸುವುದು ಈ ಸಂದರ್ಭದಲ್ಲೂ ಪ್ರಸ್ತುತವಾಗಿದೆ.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಹೀಗೇ ಮುಂದುವರಿದರೆ ಭಾರತದಲ್ಲಿ ಇಂಧನ ಬೆಲೆ ಏರಿಕೆಯಾಗಬಹುದು. ಇದು ನೇರವಾಗಿ ಸರಕು ಸಾಗಣೆ ಮೇಲೆ ಪರಿಣಾಮ ಬೀರಲಿದೆ. ಜತೆಗೆ ಜಾಗತಿಕ ಆರ್ಥಿಕ ಅಸ್ಥಿರತೆಯ ಪರಿಣಾಮ ನೇರವಾಗಿ ಭಾರತಕ್ಕೂ ತಟ್ಟುವ ಸಾಧ್ಯತೆ ಹೆಚ್ಚು.

