ದುಬೈ: ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸಲು ಮಾತುಕತೆ ಪ್ರಗತಿಯಲ್ಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ್ದರೂ, ಯುದ್ಧ ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸಿಲ್ಲ.
ಇರಾನ್ ಸೇನೆಯು ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಮಂಗಳವಾರ ಡ್ರೋನ್, ಕ್ಷಿಪಣಿಗಳನ್ನು ಹಾರಿಸಿದೆ.
ಮತ್ತೊಂದೆಡೆ, ಇಸ್ರೇಲ್ ಸೇನೆಯು ಇರಾನ್‌ನ ಇಸ್ಫಹಾನ್ ನಗರ ಸೇರಿದಂತೆ ವಿವಿಧ ತಾಣಗಳನ್ನು ಗುರಿಯಾಗಿಸಿ ಭಾರಿ ವೈಮಾನಿಕ ದಾಳಿ ನಡೆಸಿದೆ.
ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಲು ಇರಾನ್‌ಗೆ ನೀಡಿದ್ದ ಗಡುವನ್ನು ಟ್ರಂಪ್ ಅವರು ಸೋಮವಾರ ಐದು ದಿನಗಳವರೆಗೆ ವಿಸ್ತರಿಸಿದ್ದರು. ಇರಾನ್ ಜತೆ 'ಉತ್ತಮ ಮಾತುಕತೆ' ನಡೆಯುತ್ತಿದೆ ಎಂದೂ ಹೇಳಿದ್ದರು. ಆದರೆ ಮಾತುಕತೆಗೆ ಸಂಬಂಧಿಸಿದಂತೆ ಟ್ರಂಪ್ ಹೇಳಿಕೆ ಬಗ್ಗೆ ಗೊಂದಲ ಮುಂದುವರಿದಿದೆ. 'ಅಮೆರಿಕದ ಜತೆ ಯಾವುದೇ ಮಾತುಕತೆ ನಡೆದಿಲ್ಲ' ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಜತೆ ಈಚೆಗೆ 'ನೇರ ಮಾತುಕತೆ' ನಡೆಸಿದ್ದಾರೆ ಎಂದು 'ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ. ಆದರೆ ಎರಡೂ ಕಡೆಯವರು ಇದನ್ನು ದೃಢಪಡಿಸಿಲ್ಲ.
ಅಮೆರಿಕವು ಕದನ ವಿರಾಮವನ್ನು ಪರಿಗಣಿಸುತ್ತಿದ್ದರೂ, ಇರಾನ್ ಮತ್ತು ಲೆಬನಾನ್ ಮೇಲೆ ದಾಳಿ ಮುಂದುವರಿಯಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. 'ನಮಗೆ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ' ಎಂದಿದ್ದಾರೆ.
ಇರಾನ್‌ನ ವಿದೇಶಾಂಗ ಸಚಿವರು ಅಜರ್‌ಬೈಜಾನ್, ಈಜಿಪ್ಟ್, ಒಮಾನ್, ಪಾಕಿಸ್ತಾನ, ರಷ್ಯಾ, ದಕ್ಷಿಣ ಕೊರಿಯಾ, ಟರ್ಕಿ ಮತ್ತು ತುರ್ಕಮೆನಿಸ್ತಾನದ ವಿದೇಶಾಂಗ ಸಚಿವರ ಜತೆ ಮಾತುಕತೆ ನಡೆಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
ಟೆಲ್ ಅವೀವ್‌ಗೆ ಅಪ್ಪಳಿಸಿದ ಕ್ಷಿಪಣಿ: ಟೆಲ್ ಅವೀವ್ ಸೇರಿದಂತೆ ಇಸ್ರೇಲ್‌ನ ನಗರಗಳನ್ನು ಗುರಿಯಾಗಿಸಿ ಮಂಗಳವಾರ ಬೆಳಿಗ್ಗೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ವಾಯು ರಕ್ಷಣಾ ವ್ಯವಸ್ಥೆಯನ್ನು ತಪ್ಪಿಸಿಕೊಂಡ ಕ್ಷಿಪಣಿಯೊಂದು ಟೆಲ್ ಅವೀವ್ ನಗರದ ಕೇಂದ್ರ ಭಾಗದ ರಸ್ತೆಗೆ ಅಪ್ಪಳಿಸಿದೆ. ಸ್ಫೋಟದ ತೀವ್ರತೆಗೆ ಸಮೀಪದ ಕಟ್ಟಡಗಳಿಗೆ ಹಾನಿಯಾಗಿದ್ದು, ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೂರರಿಂದ ನಾಲ್ಕು ಸಿಡಿತಲೆಗಳನ್ನು ಹೊಂದಿದ್ದ ಕ್ಲಸ್ಟರ್ ಕ್ಷಿಪಣಿಯಿಂದ ಈ ದಾಳಿ ನಡೆದಿದೆ. ಪ್ರತಿ ಸಿಡಿತಲೆಯಲ್ಲೂ ಸುಮಾರು 100 ಕೆ.ಜಿಯಷ್ಟು ಸ್ಫೋಟಕಗಳು ಇದ್ದವು ಎಂದು ಇಸ್ರೇಲ್‌ನ ಮಾಧ್ಯಮಗಳು ವರದಿ ಮಾಡಿವೆ.
ಕುವೈತ್‌ನಲ್ಲಿ ವಿದ್ಯುತ್ ತಂತಿಗಳ ಮೇಲೆ ಕ್ಷಿಪಣಿಯ ಅವಶೇಷ ಬಿದ್ದು, ಕೆಲಹೊತ್ತು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಪೂರ್ವ ಪ್ರಾಂತ್ಯದ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿ ಇರಾನ್ ಹಾರಿಸಿದ 19 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಷರೀಫ್- ಪೆಜೆಶ್ಕಿಯಾನ್ ಮಾತುಕತೆ:
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜತೆ ಮಾತನಾಡಿದ್ದು, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಪಾಕಿಸ್ತಾನವು ತನ್ನಿಂದಾದ ಸಹಾಯ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ. 'ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆಗೆ ವೇದಿಕೆ ಕಲ್ಪಿಸಲು ನಮ್ಮ ದೇಶ ಸಿದ್ಧ' ಎಂದು ಷರೀಫ್ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೆರಿಕದ ಸಂಧಾನಕಾರರಾದ ಸ್ಟೀವ್ ವಿಟ್ಕಾಫ್ ಮತ್ತು ಜರೆಡ್ ಕುಶ್ನರ್ ಅವರು ಈ ವಾರದಲ್ಲಿ ಇರಾನಿನ ಪ್ರತಿನಿಧಿಗಳ ಜತೆ ಪಾಕಿಸ್ತಾನದಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ಅಮೆರಿಕದ ಆಯಕ್ಸಿಯಸ್ ಮಾಧ್ಯಮ ವರದಿ ಮಾಡಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರೂ ಮಾತುಕತೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ದಿನದ ಬೆಳವಣಿಗೆ
* ಅಮೆರಿಕ-ಇರಾನ್ ಮಾತುಕತೆಗೆ ನಾವು ನೇರ ಮಧ್ಯಸ್ಥಿಕೆ ವಹಿಸಿಲ್ಲ ಎಂದು ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
* ತಮ್ಮ ಸಶಸ್ತ್ರ ಪಡೆಗಳು 'ಪೂರ್ಣ ಗೆಲುವು' ಸಾಧಿಸುವವರೆಗೂ ಹೋರಾಡಲಿವೆ ಎಂದು ಇರಾನ್‌ನ ಉನ್ನತ ಮಿಲಿಟರಿ ಕಮಾಂಡ್‌ನ ವಕ್ತಾರ ಮೇಜರ್ ಜನರಲ್ ಅಲಿ ಅಬ್ದುಲ್ಲಾಹಿ ಅಲಿಯಾಬಾದಿ ಹೇಳಿದ್ದಾರೆ.
* ಯುದ್ಧ ಆರಂಭವಾದ ಬಳಿಕ ಇಸ್ರೇಲ್‌ನಲ್ಲಿ 16 ಮಂದಿ ಮೃತಪಟ್ಟಿದ್ದು 4500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ನ ತುರ್ತು ವೈದ್ಯಕೀಯ ಸೇವೆಗಳ ಸಂಸ್ಥೆ ತಿಳಿಸಿದೆ.
* ಹಿಜ್ಬುಲ್ಲಾ ಬಂಡುಕೋರರ ತಾಣಗಳನ್ನು ಗುರಿಯಾಗಿಸಿ ಲೆಬನಾನ್‌ನ ಬೈರೂತ್ ಮೇಲೆ ನಡೆಸುತ್ತಿರುವ ದಾಳಿಯನ್ನು ಇಸ್ರೇಲ್ ಮುಂದುವರಿಸಿದ್ದು ಮಂಗಳವಾರ ಇಬ್ಬರು ಮೃತಪಟ್ಟಿದ್ದಾರೆ.
'ದಾಳಿ: ಮೊದಲು ಸೂಚಿಸಿದ್ದು ಹೆಗ್ಸೆತ್'
'ಇರಾನ್ ಮೇಲೆ ದಾಳಿ ನಡೆಸುವಂತೆ ಮೊದಲು ಸೂಚಿಸಿದ ವ್ಯಕ್ತಿ ಪೀಟ್ ಹೆಗ್ಸೆತ್' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆ ಮೂಲಕ ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾಗಲು ಅಮೆರಿಕದ ರಕ್ಷಣಾ ಕಾರ್ಯದರ್ಶಿ 'ಕಾರಣ' ಎಂದಿದ್ದಾರೆ. ಟೆನೆಸ್ಸಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಟ್ರಂಪ್ 'ಇರಾನ್ ಮೇಲಿನ ದಾಳಿ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್ ಮತ್ತು ವಾಯುಪಡೆಯ ಹಿರಿಯ ಅಧಿಕಾರಿ ಡೇನಿಯಲ್ ಕೇನ್ ಒಳಗೊಂಡಂತೆ ಆಪ್ತರ ಜತೆ ಮಾತನಾಡಿದ್ದೆ' ಎಂದಿದ್ದಾರೆ. 'ಪೀಟ್ (ಹೆಗ್ಸೆತ್) ದಾಳಿ ನಡೆಸುವಂತೆ ಮೊದಲು ಸೂಚಿಸಿದ್ದು ನೀವು ಎಂದು ಭಾವಿಸುತ್ತೇನೆ. ಇರಾನ್ ಅಣ್ವಸ್ತ್ರ ಹೊಂದಲು ಬಿಡಲು ಸಾಧ್ಯವಿಲ್ಲ ಎಂದು ನೀವು ಹೇಳಿದ್ದೀರಿ' ಎಂದು ಸಭೆಯಲ್ಲಿ ಹಾಜರಿದ್ದ ಹೆಗ್ಸೆತ್ ಅವರತ್ತ ತಿರುಗಿ ಟ್ರಂಪ್ ಹೇಳಿದ್ದಾರೆ.

