HEALTH TIPS

ಬಿಹಾರ: ಏಪ್ರಿಲ್‌ 6ಕ್ಕೆ ಹೊಸ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆ

ಪಟ್ನಾ: ರಾಜ್ಯಸಭೆಗೆ ನಿತೀಶ್ ಕುಮಾರ್ ಅವರು ಮಾರ್ಚ್‌ 16ರಂದು ಆಯ್ಕೆಯಾದರೂ ಮುಖ್ಯಮಂತ್ರಿ ಹುದ್ದೆಗೆ ತಕ್ಷಣಕ್ಕೆ ರಾಜೀನಾಮೆ ನೀಡುವುದಿಲ್ಲ.

ನಿತೀಶ್ ಅವರು ತಕ್ಷಣಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಏಪ್ರಿಲ್ 5 ಅಥವಾ 6ರ ಒಳಗೆ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ಈ ಸಭೆಯಲ್ಲಿ ನೂತನ ನಾಯಕನ್ನು ಆಯ್ಕೆ ಮಾಡಲಾಗುವುದು ಎಂದು ಇಲ್ಲಿನ ಆಡಳಿತ ಪಕ್ಷದ ಮೂಲಗಳು ದೃಢಪಡಿಸಿವೆ.

'ನಿರ್ಗಮಿಸುತ್ತಿರುವ ರಾಜ್ಯಸಭಾ ಸದಸ್ಯರ ಪ್ರಸ್ತುತದ ಅವಧಿ ಏಪ್ರಿಲ್ 9ರಂದು ಕೊನೆಗೊಳ್ಳುತ್ತದೆ. ನಿತೀಶ್ ಕುಮಾರ್ ಅವರು ಏಪ್ರಿನಲ್‌ನಲ್ಲಿ ಸಂಸತ್ತಿನ ಮೇಲ್ಮನೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅವರ ಹಿಂದಿನ ಆಡಳಿತದ ದಾಖಲೆಗಳನ್ನು ಗಮನಿಸಿದರೆ, ಅವರು ಅದೇ ಸಮಯದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸುವ ಸಾಧ್ಯತೆ ಇದೆ' ಎಂದು ಮೂಲಗಳು 'ಪ್ರಜಾವಾಣಿ'ಗೆ ಖಚಿತಪಡಿಸಿವೆ.

ರಚನೆಯಾಗಲಿರುವ ಹೊಸ ಸರ್ಕಾರದ ಬಗ್ಗೆ ಈಗಾಗಲೇ ಗೊಂದಲಗಳು ಶುರುವಾಗಿವೆ. ಹೊಸ ಸಚಿವ ಸಂಪುಟಕ್ಕೆ 17+15+2+1+1 ಸೂತ್ರ ಅನ್ವಯಿಸಲು ತಾತ್ವಿಕವಾಗಿ ನಿರ್ಧರಿಸಲಾಗಿದೆ. ಈ ಸೂತ್ರದ ಅರ್ಥವೇನೆಂದರೆ, ಬಿಜೆಪಿ ನೇತೃತ್ವದ ಹೊಸ ಸರ್ಕಾರದಲ್ಲಿ ಬಿಜೆಪಿಯ 17 ಸಚಿವರು (ಮುಖ್ಯಮಂತ್ರಿ ಹುದ್ದೆ ಸೇರಿದಂತೆ), ಜೆಡಿ (ಯು)ನ 15 ಸಚಿವರು (ನಿತೀಶ್ ಅವರ ಪುತ್ರ ನಿಶಾಂತ್ ಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಸೇರಿದಂತೆ), ಚಿರಾಗ್ ಪಾಸ್ವಾನ್ ಅವರ ಪಕ್ಷವನ್ನು ಪ್ರತಿನಿಧಿಸುವ ಎಲ್‌ಜೆಪಿ (ಆರ್)ಯಿಂದ ಇಬ್ಬರು ಸಚಿವರು, ಹಿಂದೂಸ್ತಾನ್ ಅವಾಮ್ ಮೋರ್ಚಾ (ಎಚ್‌ಎಎಂ) ಮತ್ತು ರಾಷ್ಟ್ರೀಯ ಲೋಕ ಮೋರ್ಚಾಗೆ (ಆರ್‌ಎಲ್‌ಎಂ) ತಲಾ ಒಂದು ಸಚಿವ ಸ್ಥಾನ ಇರುತ್ತದೆ.

ಎಚ್‌ಎಎಂ ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಅವರ ಪುತ್ರ ಸುಮನ್ ಕುಮಾರ್ ಮತ್ತು ಆರ್‌ಎಲ್‌ಎಂ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರ ಪುತ್ರ ದೀಪಕ್ ಪ್ರಕಾಶ್ ಅವರು ಮುಂದಿನ ಸರ್ಕಾರದಲ್ಲಿ ಎನ್‌ಡಿಎ ಮಿತ್ರಪಕ್ಷಗಳನ್ನುಪ್ರತಿನಿಧಿಸುವ ಸಚಿವರಾಗಿ ಮುಂದುವರಿಯುತ್ತಾರೆ.

ಬಿಹಾರ ವಿಧಾನಸಭೆಯ ಒಟ್ಟು ಬಲ 243. ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಬಿಹಾರ ಸರ್ಕಾರದ ಸಚಿವ ಸಂಪುಟದಲ್ಲಿ ಗರಿಷ್ಠ 36 ಸದಸ್ಯರನ್ನು ಹೊಂದಬಹುದು.

2025ರ ನವೆಂಬರ್‌ನಲ್ಲಿ ಜೆಡಿಯು ಮುಖ್ಯಮಂತ್ರಿ ಹುದ್ದೆಯನ್ನು ಹೊಂದಿದ್ದರೂ,‌ ಬಿಜೆಪಿಗೆ ಇಬ್ಬರು ಉಪಮುಖ್ಯಮಂತ್ರಿಗಳ ಜೊತೆಗೆ, ಸ್ಪೀಕರ್ ಹುದ್ದೆಯ ಬೇಡಿಕೆಯನ್ನು ಇರಿಸಲಾಗಿತ್ತು. ಈಗಲೂ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು ಇಟ್ಟುಕೊಂಡಿದ್ದರೂ, ಸ್ಪೀಕರ್ ಹುದ್ದೆಯನ್ನು ತನ್ನಲ್ಲಿಯೇ ಇಟ್ಟುಕೊಳ್ಳಲು ಬಯಸುತ್ತಿದೆ' ಎಂದು ಆಡಳಿತ ಪಕ್ಷದ ಹಿರಿಯ ನಾಯಕರೊಬ್ಬರು ಬಹಿರಂಗಪಡಿಸಿದ್ದಾರೆ.

'ಬಿಜೆಪಿ ಮುಖ್ಯಮಂತ್ರಿ ಹುದ್ದೆ ಇಟ್ಟುಕೊಂಡಿದ್ದರೂ, ವಿಧಾನಸಭಾ ಸ್ಪೀಕರ್ ಹುದ್ದೆಯನ್ನೂ ತಾನೇ ಉಳಿಸಿಕೊಂಡರೆ, ಜೆಡಿ (ಯು) ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ತನ್ನದೇ ಸದಸ್ಯರನ್ನು ಕೂರಿಸುವ ಸಾಧ್ಯತೆಯಿದೆ' ಎಂದು ಆಡಳಿತ ಪಕ್ಷದ ಸದಸ್ಯರೊಬ್ಬರು ತಿಳಿಸಿದ್ದಾರೆ.

'ಡಿಸಿಎಂ ಆಗಿ ನಿಶಾಂತ್‌ ಆಯ್ಕೆಗೆ ಜೆಡಿಯು ನಿರ್ಧಾರ'

ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರ ಪುತ್ರ ನಿಶಾಂತ್‌ ಅವರನ್ನು ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ಪಕ್ಷದ ಶಾಸಕ ಹರಿ ನಾರಾಯಣ್‌ ಸಿಂಗ್‌ ಅವರು ತಿಳಿಸಿದ್ದಾರೆ.

'ನಿಶಾಂತ್‌ ಅವರು ವಿಧಾನಪರಿಷತ್‌ ಸದಸ್ಯರಾಗಿ ಮುಂದಿನ ತಿಂಗಳು ಆಯ್ಕೆಯಾಗಲಿದ್ದಾರೆ. ಮುಖ್ಯಮಂತ್ರಿ ನಿವಾಸದಲ್ಲಿ ಶನಿವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ' ಎಂದು ನಿತೀಶ್‌ ಆಪ್ತರು ಆಗಿರುವ ಹರಿ ನಾರಾಯಣ್‌ ತಿಳಿಸಿದ್ದಾರೆ.

'ನಿಶಾಂತ್‌ ಅವರು ಔಪಚಾರಿಕವಾಗಿ ಜೆಡಿಯು ಸೇರುವ ಬಗ್ಗೆಯೂ ನಿರ್ಧರಿಸಲಾಗಿದೆ. ಉಪಮುಖ್ಯಮಂತ್ರಿಯಾಗಬೇಕಾದರೆ ಅವರು ಶಾಸಕಾಂಗ ಸದಸ್ಯರಾಗಿರಬೇಕಾಗಿರುವುದರಿಂದ ಮುಂದಿನ ತಿಂಗಳು ವಿಧಾನಪರಿಷತ್‌ನ ಒಂಬತ್ತು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ನಿಶಾಂತ್‌ ಸ್ಪರ್ಧಿಸಲಿದ್ದಾರೆ' ಎಂದು ಹೇಳಿದ್ದಾರೆ.

'ಹೊಸ ಸರ್ಕಾರ ರಚನೆಯಾಗುವಾಗಲೇ ನಿಶಾಂತ್‌ ಉಪಮುಖ್ಯಮಂತ್ರಿಯಾಗುತ್ತಾರೋ ಅಥವಾ ಸ್ವಲ್ಪ ಸಮಯದ ಬಳಿಕ ಅಗುತ್ತಾರೋ ಎಂಬುವುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ' ಎಂದು ತಿಳಿಸಿದ್ದಾರೆ.

ನಿಶಾಂತ ಇಂದು ಜೆಡಿ(ಯ)ಗೆ

ನಿಶಾಂತ್ ಕುಮಾರ್ ಭಾನುವಾರ ಅಧಿಕೃತವಾಗಿ ಜೆಡಿ(ಯು) ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಇಲ್ಲಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ನಿಶಾಂತ್ ಅವರು ಪಕ್ಷದ ಹಿರಿಯ ನಾಯಕರು ಸಚಿವರು ಸಂಸದರು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries