ಕೋಲ್ಕತ್ತ: ವಿಧಾನಸಭಾ ಚುನಾವಣೆಗೆ ಮುನ್ನ ಸಾಂವಿಧಾನಿಕ ಅಧಿಕಾರಿಗಳೊಂದಿಗೆ ಸಂಘರ್ಷ ಮುಂದುವರಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಟೀಕಿಸಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಅವರು, 'ರಾಷ್ಟ್ರಪತಿ ಮುರ್ಮು ಅವರು ಬಿಜೆಪಿಯ ಸಲಹೆಯಂತೆ ಮಾತನಾಡುತ್ತಾರೆ ಎಂದು ಆರೋಪಿಸಿದ ಮಮತಾ, ಮಣಿಪುರ ಮತ್ತು ಛತ್ತೀಸಗಢದ ಬುಡಕಟ್ಟು ಜನರ ಮೇಲಿನ ದೌರ್ಜನ್ಯದ ಬಗ್ಗೆ ಅವರು ಏಕೆ ಮೌನವಾಗಿದ್ದಾರೆ' ಎಂದು ಪ್ರಶ್ನಿಸಿದ್ದಾರೆ.
ಮುರ್ಮು ಅವರು ಉತ್ತರ ಬಂಗಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 'ರಾಜ್ಯದ ಕೆಲವು ಭಾಗಗಳಲ್ಲಿರವ ಬುಡಕಟ್ಟು ಜನಾಂಗದವರ ಅಭಿವೃದ್ಧಿಯ ಕುಂಠಿತಗೊಂಡಿರುವುದೇಕೆ ಎಂದು ಪ್ರಶ್ನಿಸಿದ್ದರು. ತಮ್ಮನ್ನು ಸ್ವಾಗತಿಸಲು ಯಾರೂ ಬಾರದಿರುವುದಕ್ಕೆ ಅಚ್ಚರಿಪಟ್ಟಿದ್ದ ಮುರ್ಮು ಅವರು, ಮುಖ್ಯಮಂತ್ರಿ ಅಥವಾ ಸಚಿವರು ಅಸಮಾಧನಾಗೊಂಡಿದ್ದಾರೆಯೇ' ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ ಕೆಲವೇ ಗಂಟಗಳ ನಂತರ ಮಮತಾ ಅವರು ಮುರ್ಮು ಅವರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
'ರಾಷ್ಟ್ರಪತಿಯವರು ಬಿಜೆಪಿಯ ಸಲಹೆಯ ಮೇರೆಗೆ ಬುಡಕಟ್ಟುಗಳ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಆರೋಪಿಸಿ, ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ' ಎಂದು ಮಮತಾ ಹೇಳಿದ್ದಾರೆ.
'ಈ ವಿಷಯವನ್ನು ಹೇಳಲು ನನಗೆ ನಾಚಿಕೆಯಾಗುತ್ತಿದೆ. ಗೌರವಾನ್ವಿತ ರಾಷ್ಟ್ರಪತಿಯವರನ್ನು ನಾವು ಗೌರವಿಸುತ್ತೇವೆ. ಆದರೆ, ಅವರನ್ನೂ ರಾಜಕೀಯ ಮಾರಾಟ ಮಾಡಲು ಕಳುಹಿಸಲಾಗುತ್ತಿದೆ. ಕ್ಷಮಿಸಿ, ಮೇಡಂ. ನನಗೆ ನಿಮ್ಮ ಬಗ್ಗೆ ಅಪಾರ ಗೌರವವಿದೆ, ಆದರೆ ನೀವು ಬಿಜೆಪಿಯ ನೀತಿಗಳು ಮತ್ತು ಅವರ ಸೂಚನೆಗಳನ್ನು ಅನುಸರಿಸುತ್ತಿದ್ದೀರಿ' ಎಂದು ಅವರು ಹೇಳಿದರು.
- ನರೇಂದ್ರ ಮೋದಿ, ಪ್ರಧಾನಿರಾಷ್ಟ್ರಪತಿ ಅವರ ಹುದ್ದೆ ರಾಜಕೀಯವನ್ನು ಮೀರಿದ್ದು. ಈ ಹುದ್ದೆಯ ಪಾವಿತ್ರ್ಯತೆಯನ್ನು ಸದಾ ಗೌರವಿಸಬೇಕು. ಆದರೆ, ರಾಷ್ಟ್ರಪತಿ ಅವರಿಗೆ ಪಶ್ಚಿಮ ಬಂಗಾಳ ಸರ್ಕಾರ ಅವಮಾನ ಮಾಡಿದೆ. ಟಿಎಂಸಿ ಸರ್ಕಾರ ಎಲ್ಲ ಮಿತಿಗಳು ದಾಟಿದೆ.

