ಕೋಲ್ಕತ್ತ: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಯುವ ಸಮುದಾಯಕ್ಕೆ ಹೊಸ ಕೊಡುಗೆ ಘೋಷಿಸಿದ್ದಾರೆ.
10ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿಗಳಿಗೆ ಮಾಸಿಕ ₹1,500 ಭತ್ಯೆ ನೀಡುವ 'ಯುವ ಸಾಥಿ' ಯೋಜನೆ ಜಾರಿಗೊಳಿಸಿದ್ದಾರೆ.
'ವಿಶ್ವ ಮಹಿಳಾ ದಿನದ ಉಡುಗೊರೆಯಾಗಿ ಈ ಯೋಜನೆ ಜಾರಿ ಮಾಡಿದ್ದು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು 21ರಿಂದ 40 ವರ್ಷ ವಯಸ್ಸಿನ ಉದ್ಯೋಗಾಂಕ್ಷಿಗಳು ಭತ್ಯೆಗೆ ಅರ್ಹರಾಗಿದ್ದಾರೆ' ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಎಸ್‌ಐಆರ್ ನಂತರ ಹಲವು ಮತದಾರರ ಹೆಸರು ಅಳಿಸಿ ಹಾಕಲಾಗಿದೆ ಎಂದು ಆರೋಪಿಸಿ ನಡೆಸುತ್ತಿರುವ ಧರಣಿ ಸ್ಥಳದಲ್ಲೇ ಮಮತಾ ಅವರು ಈ ಯೋಜನೆ ಬಗ್ಗೆ ಮಾಹಿತಿ ನೀಡಿದರು.
'ಏಪ್ರಿಲ್‌ನಿಂದ ಯೋಜನೆ ಆರಂಭಿಸಲು ನಿರ್ಧರಿಸಿದ್ದೆವು. ಆದರೆ ಮಾರ್ಚ್ 7ರಿಂದಲೇ ಗೌರವ ಧನ ವಿತರಣೆ ಶುರುವಾಗಿದೆ. ಅಂದಾಜು ಒಂದು ಕೋಟಿ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ವ್ಯಾಸಂಗ ಮಾಡುತ್ತಿರುವ, ವಿದ್ಯಾರ್ಥಿ ವೇತನ ಹೊರತುಪಡಿಸಿ ಬೇರೆ ಯೋಜನೆಯ ಫಲಾನುಭವಿ ಅಲ್ಲದವರಿಗೂ ಈ ಗೌರವ ಧನ ಸಿಗಲಿದೆ' ಎಂದರು.
'ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಶೇ 40ರಷ್ಟು ಇಳಿದಿದೆ. ಕನಿಷ್ಠ 40 ಲಕ್ಷ ಮಂದಿಗೆ ಕೌಶಲ ಆಧಾರಿತ ತರಬೇತಿ ನೀಡಿದ್ದೇವೆ. ಇದರಲ್ಲಿ 10 ಲಕ್ಷ ಮಂದಿ ಈಗಾಗಲೇ ಉದ್ಯೋಗಿಗಳಾಗಿದ್ದಾರೆ' ಎಂದು ಹೇಳಿದರು.
'ರೈತರಿಗೆ ಪ್ರತಿ ತಿಂಗಳೂ ₹ 10,000 ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ಭೂ ರಹಿತ ರೈತರು ಮಾಸಿಕ ₹ 4,000 ಪಡೆಯುತ್ತಿದ್ದಾರೆ' ಎಂದು ಅವರು ತಿಳಿಸಿದರು.
'ಬಿರ್‌ಭುಮ್ ಜಿಲ್ಲೆಯ ದೇವುಚಾ ಪಚಾಮಿ ಬೃಹತ್ ಕಲ್ಲಿದ್ದಲು ಘಟಕದಲ್ಲಿ ಒಂದು ಲಕ್ಷ ಮಂದಿಗೆ ಉದ್ಯೋಗ ದೊರೆಯಲಿದೆ. ಮುಂದಿನ 100 ವರ್ಷಗಳಿಗೆ ರಾಜ್ಯದಲ್ಲಿ ವಿದ್ಯುತ್ ಕಡಿತ ಇರುವುದಿಲ್ಲ' ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.
ಧೈರ್ಯವಿದ್ದರೆ ಪಶ್ಚಿಮ ಬಂಗಾಳ ವಿಭಜಿಸಿ:ಮಮತಾ ಸವಾಲು
'ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಂತರ ಮತದಾರರ ಹೆಸರನ್ನು ಬೃಹತ್ ಪ್ರಮಾಣದಲ್ಲಿ ಅಳಿಸಿ ಹಾಕಿರುವುದು ರಾಜ್ಯವನ್ನು ವಿಭಜಿಸುವ ಹುನ್ನಾರ' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಸ್ವೇಚ್ಛಾನುಸಾರ ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂದು ಆರೋಪಿಸಿ ನಡೆಸುತ್ತಿರುವ ಧರಣಿಯಲ್ಲಿ ಶನಿವಾರ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. 'ಚುನಾವಣಾ ಆಯೋಗ ಮತ್ತು ಬಿಜೆಪಿಯ ಉದ್ದೇಶ ಬಂಗಾಳವನ್ನು ಇಬ್ಭಾಗ ಮಾಡುವುದು. ರಾಜ್ಯವನ್ನು ವಿಭಜಿಸಿ ಮತ ಪಡೆಯಲು ಬಿಜೆಪಿ ಬಯಸುತ್ತಿದೆ. ರಾಜ್ಯದ ಒಂದು ಭಾಗವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಹುನ್ನಾರ ಅಡಗಿದೆ. ಇತರೆ ರಾಜ್ಯಗಳಲ್ಲಿ ಬಿಜೆಪಿಯವರು ಬಂಗಾಳಿ ಭಾಷಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ' ಎಂದು ಅವರು ಆರೋಪಿಸಿದರು.
ಬಿಹಾರ ಮತ್ತು ಪಶ್ಚಿಮ ಬಂಗಾಳವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶ ರಚಿಸಲಾಗುತ್ತದೆ ಎಂಬ ಟ್ವೀಟ್ ಒಂದನ್ನು ತಾನು ಗಮನಿಸಿದ್ದಾಗಿ ಶುಕ್ರವಾರ ಮಮತಾ ಆರೋಪಿಸಿದ್ದರು. 'ಜಾರ್ಖಂಡ್ ರಾಜ್ಯ ರಚಿಸಿ ಬಿಹಾರದಲ್ಲಿ ಇದನ್ನು ಪ್ರಯೋಗಿಸಿದ್ದರು. ಮತ್ತೆ ಅದನ್ನೇ ಮಾಡಲು ಹೊರಟಿದ್ದಾರೆ. ಅವರಿಗೆ ಧೈರ್ಯವಿದ್ದರೆ ಬಂಗಾಳವನ್ನು ಮುಟ್ಟಲಿ. ಬಂಗಾಳವನ್ನು ವಿಭಜನೆ ಮಾಡಲು ಬಿಜೆಪಿಯಿಂದ ಸಾಧ್ಯವಿಲ್ಲ. ನೀವು ಎಲ್ಲೆ ಮೀರಿದರೆ ನಿಮ್ಮ ದೆಹಲಿ ಸರ್ಕಾರವೇ ಉರುಳಿಬೀಳಲಿದೆ' ಎಂದು ಎಚ್ಚರಿಸಿದರು. 'ಎಸ್‌ಐಆರ್ ನಂತರ ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳನ್ನು ಆಯೋಗ ಕೈಬಿಟ್ಟಿದೆ. ದಿನ್ಹಾಟ ಕ್ಷೇತ್ರದಲ್ಲಿ 36000 ಹೆಸರುಗಳನ್ನು ಅಳಿಸಿ ಹಾಕಲಾಗಿದೆ. ನನ್ನ ಕ್ಷೇತ್ರದಲ್ಲೇ (ಭವಾನಿಪುರ) 60000 ಮತದಾರರನ್ನು ತೆಗೆದು ಹಾಕಲಾಗಿದೆ. ಇಡೀ ಮತದಾರರ ಪಟ್ಟಿಯನ್ನೇ ಅಳಿಸಿ ಹಾಕಿ ನೋಡೋಣ' ಎಂದು ಮಮತಾ ಆಕ್ರೋಶ ಹೊರಹಾಕಿದರು.
'ಬಂಗಾಳ ವಿಭಜನೆಗೆ ಬಯಸಿರುವ ನೀವು (ಬಿಜೆಪಿ) ಮೊದಲು ಎಪ್‌ಸ್ಟೈನ್ ಫೈಲ್ಸ್ ನೋಡಿಕೊಳ್ಳಿ. ನೆನಪಿರಲಿ ನಮ್ಮ ಮೇಲೆ ದಾಳಿ ಹೆಚ್ಚಿಸಿದಷ್ಟೂ ನಮ್ಮಿಂದ ಪ್ರಬಲ ಪ್ರತಿರೋಧ ಎದುರಿಸುತ್ತೀರಿ' ಎಂದರು. ಎಲ್‌ಪಿಜಿ ದರ ಏರಿಕೆ ಖಂಡಿಸಿ ಪ್ರತಿಭಟನೆ: ಮತದಾರರ ಪಟ್ಟಿಯಿಂದ ಮಹಿಳೆಯರ ಹೆಸರು ಅಳಿಸಿರುವುದು ಅಡುಗೆ ಅನಿಲ (ಎಲ್‌ಪಿಜಿ) ದರ ಏರಿಕೆ ಖಂಡಿಸಿ ವಿಶ್ವ ಮಹಿಳಾ ದಿನವಾದ ಮಾರ್ಚ್ 8ರಂದು (ಭಾನುವಾರ) ಸಾವಿರಾರು ಮಹಿಳೆಯರು ಕಪ್ಪು ಬಟ್ಟೆ ಧರಿಸಿ ಪಶ್ಚಿಮ ಬಂಗಾಳದ ರಸ್ತೆಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಮಮತಾ ಬ್ಯಾನರ್ಜಿ ಇದೇ ವೇಳೆ ಎಚ್ಚರಿಸಿದರು.
ಎರಡನೇ ದಿನವೂ ಧರಣಿ
ಪಶ್ಚಿಮ ಬಂಗಾಳದಲ್ಲಿ ಮತದಾರರ ಹೆಸರುಗಳನ್ನು ಮನಸೋಇಚ್ಛೆ ಅಳಿಸಿ ಹಾಕಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಆರಂಭಿಸಿದ್ದ ಧರಣಿಯನ್ನು ಶನಿವಾರವೂ ಮುಂದುವರಿಸಿದರು.
ಸೆಂಟ್ರಲ್ ಕೋಲ್ಕತ್ತದ ಮೆಟ್ರೋ ಚಾನಲ್ ಬಳಿ ರಾತ್ರಿಯಿಡೀ ಧರಣಿ ಸ್ಥಳದಲ್ಲೇ ಅವರು ಕುಳಿತಿದ್ದರು. ಮುಖ್ಯಮಂತ್ರಿ ಅಹೋರಾತ್ರಿ ಧರಣಿಗೆ ಸಚಿವರು ಟಿಎಂಸಿಯ ಶಾಸಕರು ಮತ್ತು ಹಲವು ಮುಖಂಡರು ಕೈಜೋಡಿಸಿದರು. 'ಪಶ್ಚಿಮ ಬಂಗಾಳ ಮತದಾರರ ಹಕ್ಕು ಕಸಿಯಲು ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಜೊತೆ ಕೈಜೋಡಿಸಿದೆ. ಬೃಹತ್ ಪ್ರಮಾಣದಲ್ಲಿ ಅರ್ಹ ಮತದಾರರ ಹೆಸರು ಅಳಿಸಿ ಹಾಕಲಾಗಿದೆ' ಎಂದು ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದಾರೆ.
ಫೆಬ್ರುವರಿ 28ರಂದು ಬಿಡುಗಡೆಯಾದ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಒಟ್ಟಾರೆ 63.66 ಲಕ್ಷ ಮತದಾರರ ಹೆಸರುಗಳನ್ನು (ಶೇ 8.3ರಷ್ಟು) ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದ ರಾಜ್ಯದ ಮತದಾರರ ಸಂಖ್ಯೆ 7.66 ಕೋಟಿಯಿಂದ 7.04 ಕೋಟಿಗೆ ಇಳಿದಿದೆ. ಇದಲ್ಲದೆ 60.06 ಲಕ್ಷ ಮತದಾರರ ಹೆಸರನ್ನೂ ಆಯೋಗ ನಿರ್ಣಯದ ಹಂತದಲ್ಲಿ (ಪರಿಶೀಲನೆ) ಇಟ್ಟಿದೆ. ಈ ಮತದಾರರ ಅರ್ಹತೆಯ ಕಾನೂನು ಪರಿಶೋಧನೆ ನಡೆಸಲಾಗುತ್ತಿದೆ. ಇದು ಟಿಎಂಸಿ ವಿರೋಧಕ್ಕೆ ಕಾರಣವಾಗಿದೆ.

