HEALTH TIPS

ನಿಮಿಷಗಳಲ್ಲಿ ₹8ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು:ಷೇರುಪೇಟೆಯಲ್ಲಿ ತಲ್ಲಣ ಏಕೆ?

ಮುಂಬೈ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಘೋರ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ಷೇರುಪೇಟೆಯಲ್ಲಿ ತಲ್ಲಣ ಶುರುವಾಗಿದೆ. ಸೋಮವಾರ ಬೆಳಿಗ್ಗೆ ಸೆನ್ಸೆಕ್ಸ್ 2,743 ಅಂಶಗಳ ಕುಸಿತದೊಂದಿಗೆ ಅಂದರೆ ಶೇ 3.34ರಷ್ಟು ಕುಸಿದು 78,543ರಲ್ಲಿ ವಹಿವಾಟು ಆರಂಭಿಸಿತ್ತು. 10 ಗಂಟೆ ಹೊತ್ತಿಗೆ ಕೊಂಚ ಚೇತರಿಸಿಕೊಂಡು 80,457ರಲ್ಲಿ ವಹಿವಾಟು ನಡೆಸುತ್ತಿತ್ತು.

ಆದರೆ, ಜಾಗತಿಕ ಭೌಗೋಳಿಕ ರಾಜಕಾರಣದ ಪರಿಣಾಮದಿಂದ ಸೂಚ್ಯಂಕ ಭಾರಿ ಏರಿಳಿತ ಅನುಭವಿಸಿತು. ಕೆಲ ವರದಿಗಳ ಪ್ರಕಾರ, ಮಾರುಕಟ್ಟೆ ಆರಂಭವಾಗಿ ಕೆಲವೇ ನಿಮಿಷಗಳಲ್ಲೇ ಹೂಡಿಕೆದಾರರು ₹8 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ಬಿಎಸ್‌ಇಯ ಒಟ್ಟಾರೆ ಮಾರುಕಟ್ಟೆ ಬಂಡವಾಳ ₹463.50 ಲಕ್ಷ ಕೋಟಿಯಿಂದ ₹455 ಲಕ್ಷ ಕೋಟಿಗೆ ಕುಸಿದಿದೆ.

ನಿಫ್ಟಿ 500 ಅಂಶ ಕುಸಿತದೊಂದಿಗೆ 24,645ರಲ್ಲಿ ವಹಿವಾಟು ಆರಂಭಿಸಿತ್ತು.

ಸೋಮವಾರದ ಷೇರುಪೇಟೆ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 1,048.34 ಅಂಶ ಕುಸಿದು 80,238ರಲ್ಲಿ ವಹಿವಾಟು ಅಂತ್ಯಗೊಳಿಸಿದರೆ, ನಿಫ್ಟಿ 312 ಅಂಶ ಕುಸಿದು 24,865 ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಹಾಗಾದರೆ, ಷೇರುಪೇಟೆ ಏಕೆ ಕುಸಿಯುತ್ತಿದೆ ಎಂಬುದರ ಕುರಿತು ಪ್ರಮುಖ ಅಂಶಗಳು ಇಂತಿವೆ.

1) ಅಮೆರಿಕ- ಇರಾನ್ ಘೋರ ಯುದ್ಧ

ಪರಮಾಣು ಒಪ್ಪಂದಕ್ಕೆ ಒಪ್ಪದ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಭೀಕರ ವಾಯುದಾಳಿ ನಡೆಸಿದ್ದು, ಇರಾನ್ ಪರಮೋಚ್ಚ ನಾಯಕ ಅಯತೋಲ್ಲಾ ಖಮೇನಿ ಮತ್ತು ಸಹಚರರು, ಅಧಿಕಾರಿಗಳನ್ನು ಕೊಂದಿದೆ. ಇದರಿಂದ ತಿರುಗಿಬಿದ್ದಿರುವ ಇರಾನ್, ಗಲ್ಫ್ ದೇಶಗಳಲ್ಲಿರುವ ಅಮೆರಿಕ ನೆಲೆಗಳು, ತೈಲಾಗಾರಗಳು ಮತ್ತು ಜನವಸತಿ ಪ್ರದೇಶಗಳ ಮೇಲೂ ದಾಳಿ ನಡೆಸುತ್ತಿದೆ. ಈ ಯುದ್ಧ ಬೇರೆಡೆಗೂ ವ್ಯಾಪಿಸಿ ಮತ್ತಷ್ಟು ಉಲ್ಬಣಗೊಳ್ಳುವ ಆತಂಕದಲ್ಲಿ ಹೂಡಿಕೆದಾರರಿದ್ದಾರೆ. ಅಲ್ಲದೆ, ಇರಾನ್ ಕ್ಷಿಪಣಿ ದಾಳಿಯಲ್ಲಿ ಅಮೆರಿಕದ ಮೂವರು ಅಧಿಕಾರಿಗಳ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಟ್ರಂಪ್ ಗುಡುಗಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

2) ದಾಖಲೆಯ ಮಟ್ಟಕ್ಕೆ ಕಚ್ಚಾತೈಲ ದರ

ಯುದ್ಧದಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ಕಚ್ಚಾತೈಲ ಸರಬರಾಜಿಗೆ ತೊಡಕಾಗಿದೆ. ಅಲ್ಲದೆ, ತೈಲ ಉತ್ಪಾದಿಸುವ ಗಲ್ಫ್ ದೇಶಗಳ ಮೇಲೆ ದಾಳಿ ನಡೆಯುತ್ತಿದ್ದು, ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಇದು ಬೆಲೆ ಏರಿಕೆಗೆ ಕಾರಣವಾಗಿದೆ. ಕಚ್ಚಾತೈಲ ಫ್ಯೂಚರ್ಸ್ ಸೋಮವಾರ‍ ಶೆ 8ರಷ್ಟು ಜಿಗಿದರೆ, ಬ್ರೆಂಟ್ ಕಚ್ಚಾತೈಲ ಬೆಲೆಯಲ್ಲಿ ಶೇ 7.29ರಷ್ಟು. ಏರಿಕೆಯಾಗಿ, ಪ್ರತಿ ಬ್ಯಾರಲ್. ಬೆಲೆ 77.85 ಡಾಲರ್ ಆಗಿದೆ. ಇದು 100 ಡಾಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.. ಕಚ್ಚಾ ತೈಲದ ಬೆಲೆ ದಿಢೀರ್ ಏರಿಕೆಯು ಭಾರತೀಯ ಆರ್ಥಿಕತೆಗ ಮೇಲೆ ಗಂಭೀರ ಋಣಾತ್ಮಕ ಅಂಶವಾಗಿದೆ ಮತ್ತು ಷೇರುಪೇಟೆಯಲ್ಲಿ ಆತಂಕ ಸೃಷ್ಟಿಸಿದೆ ಎನ್ನುತ್ತಾರೆ ತಜ್ಞರು. ಇದರ ಪರಿಣಾಮ ಚಾಲ್ತಿ ಖಾತೆ ಕೊರತೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ಹಣದುಬ್ಬರ ಹೆಚ್ಚಳ ಮತ್ತು ವಿದೇಶಿ ಹೂಡಿಕೆಯ ಹೊರಹರಿವು ವೇಗ ಪಡೆದುಕೊಂಡಿದೆ.

ಪ್ರತಿ ಬ್ಯಾರಲ್ ಕಚ್ಚಾತೈಲ ಬೆಲೆಯಲ್ಲಿ 10 ಡಾಲರ್‌ ಏರಿಕೆಯಾದರೆ ಭಾರತಕ್ಕೆ ವರ್ಷಕ್ಕೆ ₹10 ಸಾವಿರ ಕೋಟಿಯಿಂದ ₹15 ಸಾವಿರ ಕೋಟಿ ಹೊರೆಯಾಗಲಿದೆ. ಹೊರ್ಮುಜ್ ಜಲಸಂಧಿಯ ತಡೆಯು ಮುಂದುವರೆದರೆ ಕಚ್ಚಾ ತೈಲ ಬೆಲೆ ಮತ್ತಷ್ಟು ದುಬಾರಿಯಾಗುವ ಆತಂಕವಿದೆ.

3) ಅಮೆರಿಕ ಡಾಲರ್ ಎದುರು ₹91 ಮೀರಿದ ರೂಪಾಯಿ ಮೌಲ್ಯ

ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 91ರ ಗಡಿ ದಾಟಿದೆ. ಪ್ರತಿ ಡಾಲರ್‌ಗೆ ₹91.50 ಆಗಿದೆ. ಇದರಿಂದಾಗಿ ವಿದೇಶಿ ಹೂಡಿಕೆ ಹೊರಹರಿವು, ಹೂಡಿಕೆ ವೆಚ್ಚ ಹೆಚ್ಚಾಗಿ ಕಂಪನಿಗಳ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶಿಸಿ, ರೂಪಾಯಿ ಮೌಲ್ಯ ಕುಸಿತ ತಡೆಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ವರ್ಷ ₹91.98ಕ್ಕೆ ಕುಸಿದಿದ್ದ ರೂಪಾಯಿ ಮೌಲ್ಯ ಬಳಿಕ ಚೇತರಿಕೆ ಕಂಡಿತ್ತು.

4) ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮತ್ತೆ ಸೆಲ್ ಬಟನ್ ಒತ್ತುತ್ತಿದ್ದಾರೆ.

ಜಾಗತಿಕ ಅನಿಶ್ಚಿತತೆ ನಡುವೆ ತಮ್ಮ ಹೂಡಿಕೆ ಕಾರ್ಯತಂತ್ರ ಬದಲಿಸಿರುವ ಎಫ್‌ಐಐಗಳು, ಫೆಬ್ರುವರಿಯಲ್ಲಿ ಆಕ್ರಮಣಕಾರಿ ಮಟ್ಟದಲ್ಲಿ ಷೇರುಗಳ ಮಾರಾಟ ಮಾಡಿದ್ದಾರೆ. ಶುಕ್ರವಾರ ₹7,500 ಕೋಟಿಗೂ ಅಧಿಕ ಮೌಲ್ಯದ ಷೇರು ಮಾರಾಟ ಮಾಡಿದ್ದಾರೆ. ಭಾರತೀಯ ಈಕ್ವಿಟಿ ಷೇರುಪೇಟೆಯಲ್ಲಿ ಸತತ 8ನೇ ತಿಂಗಳು ಮಾರಾಟ ಮುಂದುವರಿಸಿದ್ದಾರೆ. ಯುದ್ಧ ಪರಿಣಾಮ ರೂಪಾಯಿ ಮೌಲ್ಯ ಮತ್ತಷ್ಟು ಕುಸಿದರೆ ವಿದೇಶಿ ಬಂಡವಾಳಧ ಹೊರಹರಿವು ಸಹ ಹೆಚ್ಚುವ ಸಾಧ್ಯತೆ ಇದೆ.

5. ಹೆಚ್ಚಿದ ಭೌಗೋಳಿಕ ರಾಜಕೀಯ ಅನಿಶ್ಚಿತತೆಯು ಮಾರುಕಟ್ಟೆ ಮೇಲೆ ಸ್ಥೂಲ ಪರಿಣಾಮ ಬೀರುತ್ತಿದೆ

ಉತ್ತಮ ದೇಶೀಯ ಬೇಡಿಕೆ, ಸರ್ಕಾರಿ ಬಂಡವಾಳ ಹೂಡಿಕೆ ಮತ್ತು ವಿತ್ತೀಯ ಸಡಿಲಿಕೆಯಿಂದಾಗಿ ಕಳೆದ ಹಲವಾರು ತ್ರೈಮಾಸಿಕಗಳಲ್ಲಿ ಭಾರತದ ಆರ್ಥಿಕತೆಯು ಸ್ಥಿತಿಸ್ಥಾಪಕತ್ವವನ್ನು ಕಾಯ್ದುಕೊಂಡಿದೆ. ಆದರೂ, ಭಾರತೀಯ ಆರ್ಥಿಕತೆಯ ಮೇಲೆ ಭೌಗೋಳಿಕ ರಾಜಕೀಯ ಮತ್ತು ಭೌಗೋಳಿಕ ಆರ್ಥಿಕ ಅಪಾಯಗಳ ಪರಿಣಾಮ ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries