HEALTH TIPS

ನಕಲಿ ತೀರ್ಪು ಆಧರಿಸಿದ ನ್ಯಾಯತೀರ್ಮಾನ ದುರ್ನಡತೆಗೆ ಸಮ: ಸುಪ್ರೀಂ ಕೋರ್ಟ್‌

ನವದೆಹಲಿ: ಕೃತಕ ಬುದ್ಧಿಮತ್ತೆಯ (ಎಐ) ಸಹಾಯದಿಂದ ಸೃಷ್ಟಿಸಿದ ನಕಲಿ ತೀರ್ಪುಗಳನ್ನು ಆಧರಿಸಿ ವಿಚಾರಣಾ ನ್ಯಾಯಾಲಯಗಳು ನೀಡುವ ತೀರ್ಪು ಲೋಪವಷ್ಟೇ ಅಲ್ಲ, ಅದನ್ನು ದುರ್ನಡತೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಅಲೋಕ್‌ ಆರಾಧೆ ಅವರಿದ್ದ ಪೀಠವು ಈ ಸಂಬಂಧ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಭಾರತೀಯ ವಕೀಲರ ಸಂಘಕ್ಕೆ (ಬಿಸಿಐ) ನೋಟಿಸ್ ಜಾರಿ ಮಾಡಿದೆ.

ಈ ವಿಷಯದಲ್ಲಿ ಸಹಾಯ ಮಾಡಲು ಹಿರಿಯ ವಕೀಲ ಶ್ಯಾಮ್‌ ದಿವಾನ್‌ ಅವರನ್ನು ನೇಮಿಸಿದೆ.

'ಎಐ ಮೂಲಕ ಸೃಷ್ಟಿಸಿದ ಅಸ್ತಿತ್ವದಲ್ಲೇ ಇಲ್ಲದ ಅಥವಾ ನಕಲಿ ತೀರ್ಪುಗಳನ್ನು ವಿಚಾರಣಾ ನ್ಯಾಯಾಲಯಗಳು ಪರಿಗಣಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದು ನ್ಯಾಯಾಂಗ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರ ಪರಿಣಾಮಗಳು ಮತ್ತು ಹೊಣೆಗಾರಿಕೆಯನ್ನು ಪರಿಶೀಲಿಸಲು ನಾವು ಬಯಸುತ್ತೇವೆ' ಎಂದು ಪೀಠವು ಫೆಬ್ರುವರಿ 27ರಂದು ನೀಡಿರುವ ಆದೇಶದಲ್ಲಿ ತಿಳಿಸಿದೆ.

'ಇಂತಹ ಅಸ್ತಿತ್ವದಲ್ಲಿ ಇಲ್ಲದ ಅಥವಾ ನಕಲಿ ತೀರ್ಪುಗಳ ಆಧಾರದ ಮೇಲೆ ತೆಗೆದುಕೊಳ್ಳುವ ನಿರ್ಧಾರವು ಕೇವಲ ನಿರ್ಧಾರ ತೆಗೆದುಕೊಳ್ಳುವಲ್ಲಿನ ದೋಷವಷ್ಟೇ ಅಲ್ಲ, ಬದಲಿಗೆ, ಇದು ದುರ್ನಡತೆಯಾಗುತ್ತದೆ. ಜತೆಗೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ನಾವು ಈ ವಿಷಯವನ್ನು ಹೆಚ್ಚು ವಿವರವಾಗಿ ಪರಿಶೀಲಿಸುವುದು ಅನಿವಾರ್ಯವಾಗಿದೆ' ಎಂದು ಅಭಿಪ್ರಾಯಪಟ್ಟಿದೆ.

ಆಂಧ್ರ ಪ್ರದೇಶ ಹೈಕೋರ್ಟ್‌ ಜನವರಿಯಲ್ಲಿ ನೀಡಿದ್ದ ತಡೆಯಾಜ್ಞೆ ಕುರಿತಾದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಈ ವಿಷಯವು ಸುಪ್ರೀಂ ಕೋರ್ಟ್‌ ಮುಂದೆ ಬಂದಿದೆ.

ಏನಿದು ಪ್ರಕರಣ?: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ, ಸ್ಥಳದ ಭೌತಿಕ ಸ್ಥಿತಿಗತಿಗಳನ್ನು ಪರಿಶೀಲಿಸಲು ವಿಚಾರಣಾ ನ್ಯಾಯಾಲಯವು ಅಡ್ವೊಕೇಟ್ ಕಮಿಷನರ್‌ ಅವರನ್ನು ನೇಮಿಸಿತ್ತು.

ಅಡ್ವೊಕೇಟ್‌ ಕಮಿಷನರ್‌ ನೀಡಿದ ವರದಿಗೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಕಳೆದ ವರ್ಷ ಆಗಸ್ಟ್‌ನಲ್ಲಿ ವಿಚಾರಣಾ ನ್ಯಾಯಾಲಯವು ಈ ಆಕ್ಷೇಪಣೆಗಳನ್ನು ವಜಾಗೊಳಿಸಿತ್ತು. ಈ ವೇಳೆ, ನ್ಯಾಯಾಲಯವು ಕೆಲವು ಹಿಂದಿನ ತೀರ್ಪುಗಳನ್ನು ಉದಾಹರಣೆಯಾಗಿ ನೀಡಿತ್ತು. ಅರ್ಜಿದಾರರು ಈ ತೀರ್ಪುಗಳ ವಿರುದ್ಧ ಮೇಲ್ಮನವಿ ಸಲ್ಲಿಸಿ, 'ನ್ಯಾಯಾಲಯ ಉಲ್ಲೇಖಿಸಿರುವ ಆ ತೀರ್ಪುಗಳು ಅಸ್ತಿತ್ವದಲ್ಲೇ ಇಲ್ಲ, ಅವು ನಕಲಿ' ಎಂದು ವಾದಿಸಿದ್ದರು.

ನಂತರ, ಹೈಕೋರ್ಟ್‌ ಆಕ್ಷೇಪಗಳನ್ನು ಪರಿಶೀಲಿಸಿದಾಗ, ತೀರ್ಪುಗಳು ಎಐ ಸಹಾಯದಿಂದ ಸೃಷ್ಟಿಯಾದವು ಎಂಬುದು ತಿಳಿದುಬಂದಿತ್ತು. ಹೈಕೋರ್ಟ್ ಈ ಬಗ್ಗೆ ಎಚ್ಚರಿಕೆ ನೀಡಿತ್ತಾದರೂ, ಅಂತಿಮವಾಗಿ ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನೇ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆಗೆ ಒಪ್ಪಿಗೆ ಸೂಚಿಸಿ, ನೋಟಿಸ್‌ ಜಾರಿ ಮಾಡಿದೆ.

'ಮೇಲ್ಮನವಿ ಅರ್ಜಿಯ ಇತ್ಯರ್ಥ ಬಾಕಿ ಇರುವವರೆಗೆ, ಅಡ್ವೊಕೇಟ್‌ ಕಮಿಷನರ್‌ ವರದಿಯ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯವು ಮುಂದಿನ ಕ್ರಮ ಕೈಗೊಳ್ಳಬಾರದು' ಎಂದು ನ್ಯಾಯಾಲಯ ಸೂಚಿಸಿ, ಮಾರ್ಚ್‌ 10ಕ್ಕೆ ವಿಚಾರಣೆ ಮುಂದೂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries