ಬದಿಯಡ್ಕ: ಭೂಮಿಕಾ ಪ್ರತಿಷ್ಠಾನ ಉಡುಪಮೂಲೆ ಎಡನೀರು ಇದರ ಆಶ್ರಯದಲ್ಲಿ ಎಡನೀರು ಶ್ರೀಮಠದ ಆವರಣದಲ್ಲಿ 14ನೇ ವರ್ಷದ ಕನ್ನಡ ಸಂಸ್ಕøತಿ ಶಿಬಿರ-2026 ಏ.8 ರಿಂದ 12ರ ವರೆಗೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಏ.8 ರಂದು ಬೆಳಿಗ್ಗೆ 9.30ಕ್ಕೆ ಭವಾನಿ ಶಂಕರ ಎಂ. ಉದ್ಘಾಟಿಸುವರು. ನಿರ್ವಹಣಾ ಕೌಶಲ್ಯದೊಂದಿಗೆ ವ್ಯಕ್ತಿತ್ವ ವಿಕಾಸದ ಬಗ್ಗೆ ನಿರ್ಮಲ್ ಕುಮಾರ್ ಕಾರಡ್ಕ ಮಾಹಿತಿ ನೀಡುವರು. 9 ರಂದು ಬೆಳಿಗ್ಗೆ 9.30 ರಿಂದ ಸುಂದರ ಹಸಿರು ನಮ್ಮಯ ಉಸಿರು ವಿಷಯದ ಬಗ್ಗೆ ಚೇವಾರು ವಿನೋದ ತರಗತಿ ತರಬೇತಿ ನೀಡುವರು. 10 ರಂದು ರಂಗೋಲ್ಲಾಸ ವಿಷಯದಲ್ಲಿ ಸದಾಶಿವ ಬಾಲಮಿತ್ರ ತರಬೇತಿ ನೀಡುವರು. 11 ರಂದು ಹಾಡೋಣ, ನಲಿಯೋಣ, ಕಲಿಯೋಣ ವಿಷಯದಲ್ಲಿ ಕಿಶೋರ್ ಪೆರ್ಲ ತರಬೇತಿ ನೀಡುವರು.
ಏ.12 ರಂದು ಬೆಳಿಗ್ಗೆ 9.30ಕ್ಕೆ ಆಡೋಣ ಕುಣಿಯೋಣ-ಕಲಿಕೆಯ ಹೊಸ ವಿಧಾನ ಕಾರ್ಯಾಗಾರದಲ್ಲಿ ಲತಾ ಪ್ರಕಾಶ್ ರಾವ್ ಬಹುಮನ ಬೆಳ್ಳೂರಡ್ಕ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುವರು. ಮಧ್ಯಾಹ್ನ 2 ರಿಂದ ಶ್ರೀಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಕಾಸರಗೋಡು ತಂಡದವರಿಂದ ಲಂಕಾ ದಹನ ಬೊಂಬೆಯಾಟ ಪ್ರದರ್ಶನ ನಡೆಯಲಿದೆ. ಬಳಿಕ ನಡೆಯುವ ಸಮಾರೋಪದಲ್ಲಿ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದು, ಹೊಂಗಿರಣ, ಮೆಲು ಹೆಜ್ಜೆ ಕೃತಿ ಲೋಕಾರ್ಪಣೆಗೊಳಿಸುವರು. ರ್ಯಾಂಕ್ ವಿಜೇತೆ ವೈದೇಹಿ ಕೆ. ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಪ್ರತಿಷ್ಠಾನದ ಸಂಯೋಜಕಿ ವಿದುಷಿ ಅನುಪಮಾ ರಾಘವೇಂದ್ರ ಉಡುಪಮೂಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



