ಅಸ್ತಿತ್ವದಲ್ಲಿರದ ಹಾಗೂ ಈ ಮೊದಲು ನೀಡಲಾಗಿತ್ತೆಂದು ಹೇಳಿಕೊಳ್ಳುವ ಹುಸಿ ತೀರ್ಪುಗಳನ್ನು ಉಲ್ಲೇಖಿಸಿ ಅವುಗಳ ಆಧಾರದಲ್ಲಿ ವಿಚಾರಣಾ ನ್ಯಾಯಾಲಯಗಳು ತೀರ್ಪು ನೀಡಿದಲ್ಲಿ ಅದನ್ನು ತಾರ್ಕಿಕ ದೋಷವೆಂಬ ಸಮಜಾಯಿಷಿ ನೀಡಲು ಸಾಧ್ಯವಿಲ್ಲ. ಇಂತಹ ತೀರ್ಪುಗಳನ್ನು ನ್ಯಾಯಾಂಗದ ದುರ್ನಡತೆಯೆಂದು ಪರಿಗಣಿಸಬಹುದಾಗಿದೆ ಮತ್ತು ಕಾನೂನಿನ ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಆಲೋಕ್ ಆರಾಧೆ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿದೆ. ಈ ಬಗ್ಗೆ ನಾವು ವಿವರವಾಗಿ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ನ್ಯಾಯಪೀಠವು 2026, ಫೆಬ್ರವರಿ 27ರ ಆದೇಶದಲ್ಲಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ತಡೆಯಾಜ್ಞೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ಆಂಧ್ರಪ್ರದೇಶ ಹೈಕೋರ್ಟ್ ಜನವರಿಯಲ್ಲಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ತೀರ್ಪನ್ನು ನೀಡಿದೆ.

