ಕೋಲ್ಕತ್ತ: ನಗರದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೀಡಾಗಿ, ಕೊಲೆಯಾದ ವೈದ್ಯ ವಿದ್ಯಾರ್ಥಿನಿಯ ತಾಯಿ, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಯಕೆ ವ್ಯಕ್ತಪಡಿಸಿರುವುದು ಬೇಸರ ತಂದಿದೆ ಎಂದು ಸಿಪಿಐ(ಎಂ) ಯುವ ನಾಯಕಿ ದೀಪ್ಸಿತಾ ಧರ್ ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೂ 'ಅಭಯಾ'ಳಿಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ಈ ಚುನಾವಣೆ ಕೇವಲ ರಾಜಕೀಯದಿಂದ ಕೂಡಿಲ್ಲ, ಇದು ಭಾವನಾತ್ಮಕ ಹೋರಾಟವಾಗಿದೆ ಎಂದು ದೀಪ್ಸಿತಾ ಧರ್ ತಿಳಿಸಿದ್ದಾರೆ
ಟಿಎಂಸಿಯ ಪ್ರಭಾವಿ ಅಭ್ಯರ್ಥಿ ಮತ್ತು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರನ್ನು ಎದುರಿಸುತ್ತಿರುವ ದೀಪ್ಸಿತಾ, ರಾಜ್ಯದ ಲಕ್ಷಾಂತರ ಪ್ರತಿಭಟನಾಕಾರರು ಆರ್.ಜಿ.ಕರ್ ಸಂತ್ರಸ್ತೆಯ ಪ್ರಕರಣಕ್ಕೆ'ಅಭಯ' (ನಿರ್ಭಯ) ಎಂಬ ಹೆಸರಿಟ್ಟಿದ್ದಾರೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಲು 'ಅಭಯ' ಸ್ಫೂರ್ತಿ ಎಂದಿದ್ದಾರೆ.
ಸಂತ್ರಸ್ತೆಯ ತಾಯಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಗಳ ಬಗ್ಗೆ ಪ್ರತಿಕ್ರಿಯಿಸಿದ ದೀಪ್ಸಿತಾ, ರಾಜಕೀಯ ಪಕ್ಷವನ್ನು ಆರಿಸಿಕೊಳ್ಳುವುದು ಅವರ ಹಕ್ಕು. ಆದರೆ ಸಿಪಿಐ(ಎಂ) ಪಕ್ಷವು ಸಂತ್ರಸ್ತೆಯ ಕುಟುಂಬದ ಪರ ನಿಂತಿರುವುದು ಕೇವಲ ಮತ ಓಲೈಕೆ ರಾಜಕಾರಣಕ್ಕಾಗಿಯಲ್ಲ,ಮಹಿಳೆಯರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ರಾಜ್ಯದ ಆಡಳಿತರೂಢಾ ಟಿಎಂಸಿಯನ್ನು ಕಿತ್ತೊಗೆಯಲು ಎಂದು ಪ್ರತಿಪಾದಿಸಿದ್ದಾರೆ.
ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಮತುವಾ ಸಮುದಾಯ, ಮುಸ್ಲಿಮರು ಮತ್ತು ಮಹಿಳೆಯರು ಸೇರಿದಂತೆ ದುರ್ಬಲ ವರ್ಗದವರ ಹೆಸರನ್ನು ಕೈಬಿಡಲಾಗುತ್ತಿದೆ ಎಂದು ಆರೋಪಿಸಿರುವ ದೀಪ್ಸಿತಾ, ಇದು ಜನರಲ್ಲಿ ಭೀತಿಯನ್ನು ಸೃಷ್ಟಿಸುತ್ತಿದ್ದು, ನಿರುದ್ಯೋಗ ಮತ್ತು ಶಿಕ್ಷಣದಂತಹ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿದೆ ಎಂದಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ದೀಪ್ಸಿತಾ, ಸಿಬಿಐ ತನಿಖೆಯ ವೈಫಲ್ಯ ಮತ್ತು ರಾಜ್ಯ ಸರ್ಕಾರದ ನಿಷ್ಕ್ರಿಯತೆಯನ್ನು ಜನ ಗಮನಿಸುತ್ತಿದ್ದಾರೆ. ಟಿಎಂಸಿಗೆ ಪಾಠ ಕಲಿಸಲು ಬಿಜೆಪಿಗೆ ಮತ ಹಾಕುತ್ತಿದ್ದವರು ಈಗ ಪರ್ಯಾಯವಾಗಿ ಎಡರಂಗದತ್ತ ಒಲವು ತೋರುತ್ತಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಟಿಎಂಸಿಯ ಪ್ರಭಾವಿ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರ ವಿರುದ್ಧ ದೀಪ್ಸಿತಾ ಧರ್ ಸ್ಪರ್ಧಿಸುತ್ತಿದ್ದು, ಈ ಹೋರಾಟ ಕೇವಲ ವ್ಯಕ್ತಿಗಳ ನಡುವಿನ ಹೋರಾಟವಲ್ಲ, ಬದಲಾಗಿ ಬಂಗಾಳದ ಮಹಿಳೆಯರ ಘನತೆ ಮತ್ತು ಉದ್ಯೋಗದ ಹಕ್ಕಿಗಾಗಿ ನಡೆಯುತ್ತಿರುವ ರಾಜಕೀಯ ಸಂಘರ್ಷ ಎಂದು ಅವರು ಹೇಳಿದ್ದಾರೆ.

