HEALTH TIPS

ಪ್ರಸ್ತಾವಿತ ಇರಾನ್-ಅಮೆರಿಕ ಶಾಂತಿ ಮಾತುಕತೆಯ ಚೌಕಟ್ಟಿನ ಬಗ್ಗೆ ಪಾಕಿಸ್ತಾನ, ತುರ್ಕಿಯೆ ಚರ್ಚೆ

ಇಸ್ಲಮಾಬಾದ್: ಅಮೆರಿಕ, ಇಸ್ರೇಲ್ ಮತ್ತು ಇರಾನ್ ಒಳಗೊಂಡಿರುವ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದ ಮಾತುಕತೆಗೆ ಸಂಭವನೀಯ ಸ್ಥಳ ಮತ್ತು ಚೌಕಟ್ಟಿನ ಬಗ್ಗೆ ಮಧ್ಯಸ್ಥಿಕೆದಾರರಾಗಿ ಗುರುತಿಸಿಕೊಂಡಿರುವ ಪಾಕಿಸ್ತಾನ ಮತ್ತು ತುರ್ಕಿಯೆ ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ.

ವೇಗವಾಗಿ ವಿಕಸನಗೊಳ್ಳುತ್ತಿರುವ ಪ್ರಾದೇಶಿಕ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲು ಪಾಕಿಸ್ತಾನದ ವಿದೇಶಾಂಗ ಸಚಿವ ಇಷಾಕ್ ದಾರ್ ಟರ್ಕಿ ವಿದೇಶಾಂಗ ಸಚಿವ ಹಕನ್ ಫಿದಾನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಸಂಭಾವ್ಯ ಸ್ಥಳಗಳು, ಉಲ್ಲೇಖದ ನಿಯಮಗಳು ಸೇರಿದಂತೆ ಮಾತುಕತೆಯ ಚೌಕಟ್ಟಿನ ಬಗ್ಗೆ ಉಭಯ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡರು ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ.

ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಗೆ ಪಾಕಿಸ್ತಾನದ ಬದ್ಧತೆಯನ್ನು ದಾರ್ ಪುನರುಚ್ಚರಿಸಿದರು ಮತ್ತು ಹೆಚ್ಚಿನ ಉಲ್ಬಣವನ್ನು ತಡೆಯಲು ನಿರಂತರ ರಾಜತಾಂತ್ರಿಕ ಉಪಕ್ರಮಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ನಿಕಟ ಸಂಪರ್ಕದಲ್ಲಿರಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಮಾತುಕತೆಗೆ ಆತಿಥ್ಯ ವಹಿಸಲು ಪಾಕಿಸ್ತಾನ ಆಸಕ್ತಿ ತೋರಿದೆ. ರಾಜತಾಂತ್ರಿಕ ಉಪಕ್ರಮಗಳನ್ನು ಶೀಘ್ರ ಆರಂಭಿಸಲು ಟರ್ಕಿಯು ಇರಾನ್ ಹಾಗೂ ಇತರ ಜಾಗತಿಕ ಶಕ್ತಿಗಳೊಂದಿಗೆ ಸಕ್ರಿಯ ಸಂಪರ್ಕದಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಮುಖ ಸ್ಥಳಗಳ ಪರಿಶೀಲನೆ ಮತ್ತು ಸ್ಥಳೀಯ ಏಜೆನ್ಸಿಗಳೊಂದಿಗೆ ಸಮನ್ವಯ ಸೇರಿದಂತೆ ಪ್ರಸ್ತಾವಿತ ಮಾತುಕತೆಗಳ ವ್ಯವಸ್ಥೆಗಳನ್ನು ಪರಿಶೀಲಿಸಲು ಅಮೆರಿಕ, ಇರಾನ್ ಮತ್ತು ಟರ್ಕಿಯ ಭದ್ರತಾ ತಂಡಗಳು ಇಸ್ಲಮಾಬಾದ್‍ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಆದರೆ ಅಮೆರಿಕ ಬೆಂಬಲಿತ ಕದನ ವಿರಾಮ ಯೋಜನೆಯನ್ನು ಇರಾನ್ ತಿರಸ್ಕರಿಸಿರುವುದು ಮತ್ತು ತನ್ನ ಷರತ್ತುಗಳನ್ನು ಒತ್ತಾಯಿಸುತ್ತಿರುವುದು ಸೇರಿದಂತೆ ಗಮನಾರ್ಹ ಅಡಚಣೆಗಳು ಉಳಿದಿವೆ ಎಂದು ವರದಿ ಹೇಳಿದೆ.

ಒಪ್ಪಂದ ಬೇಕು ಎಂದು ಒಪ್ಪಿಕೊಳ್ಳಲು ಇರಾನ್ ಹೆದರುತ್ತಿದೆ: ಟ್ರಂಪ್

ಶಾಂತಿ ಮಾತುಕತೆಯಲ್ಲಿ ಇರಾನ್ ಪಾಲ್ಗೊಳ್ಳುತ್ತಿದೆ. ಇರಾನ್ ಸಮಾಲೋಚಕರಿಗೆ ಅವರ ದೇಶದಲ್ಲಿ ಜೀವಬೆದರಿಕೆ ಇರುವುದರಿಂದ ಒಪ್ಪಂದ ಬೇಕು ಎಂದು ಒಪ್ಪಿಕೊಳ್ಳಲು ಹೆದರುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.

`ಅವರು ಮಾತುಕತೆ ನಡೆಸುತ್ತಿದ್ದಾರೆ ಮತ್ತು ಒಪ್ಪಂದ ಅವರಿಗೆ ಅನಿವಾರ್ಯವಾಗಿದೆ. ಆದರೆ ಅವರಿಗೆ ಅವರ ದೇಶದ ಜನರು ಕೊಲ್ಲಬಹುದು ಎಂಬ ಭೀತಿಯಿಂದ ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಾರೆʼ ಎಂದವರು ಪ್ರತಿಪಾದಿಸಿದ್ದಾರೆ.

ಈ ಮಧ್ಯೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯರೊಲಿನ್ ಲೆವಿಟ್ ` ಇರಾನ್ ಪ್ರಸ್ತುತ ಸಂದರ್ಭದ ವಾಸ್ತವತೆಯನ್ನು ಒಪ್ಪಿಕೊಳ್ಳಲು ವಿಫಲವಾದರೆ, ತಾವು ಯುದ್ಧದಲ್ಲಿ ಸೋಲಿಸಲ್ಪಟ್ಟಿರುವುದನ್ನು ಅರಿತುಕೊಳ್ಳಲು ವಿಫಲವಾದರೆ, ಅಧ್ಯಕ್ಷ ಟ್ರಂಪ್ ಇನ್ನೂ ಹೆಚ್ಚಿನ ಹೊಡೆತ ನೀಡುವುದು ಖಚಿತ. ಅಧ್ಯಕ್ಷರು ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ನರಕ ದರ್ಶನಕ್ಕೆ ಅವರು ಸಿದ್ಧತೆ ಮಾಡಿಕೊಂಡಿದ್ದಾರೆ. ಇರಾನ್ ಮತ್ತೆ ತಪ್ಪು ಲೆಕ್ಕಾಚಾರ ಮಾಡಬಾರದು' ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries