ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಜಾಗತಿಕವಾಗಿ ಗಂಭೀರ ಇಂಧನ ಬಿಕ್ಕಟ್ಟು ಸೃಷ್ಟಿಸಿರುವುದರಿಂದ ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ಮೂಲಗಳಿಂದ ಇಂಧನ ಖರೀದಿಸಲು ಯತ್ನಿಸುತ್ತಿದೆ. ಮುಂದಿನ ದಿನಗಳಲ್ಲೂ ಪ್ರಯತ್ನ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿರುವ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಅತ್ಯಂತ ಕಳವಳಕಾರಿಯಾಗಿದೆ. ರಾಜತಾಂತ್ರಿಕತೆಯ ಮಾತುಕತೆಯ ಮೂಲಕ ಈ ಪ್ರದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ಯುದ್ಧದ ತೀವ್ರತೆಯನ್ನು ಕಡಿಮೆ ಮಾಡುವುದು ಮತ್ತು ಹೊರ್ಮುಜ್ ಜಲಸಂಧಿ ಸಂಚಾರಕ್ಕೆ ಮುಕ್ತವಾಗಿಸುವುದು ದೇಶದ ಗುರಿಯಾಗಿದೆ. ಬಿಕ್ಕಟ್ಟನ್ನು ಶಾಂತಿಯುತವಾಗಿ ಪರಿಹರಿಸುವ ಯತ್ನವನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದ್ದಾರೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟು ದೀರ್ಘಕಾಲದವರೆಗೆ ಮುಂದುವರಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಲಭ್ಯವಿರುವ ಎಲ್ಲ ಮೂಲಗಳಿಂದ ಅನಿಲ ಮತ್ತು ಕಚ್ಚಾ ತೈಲ ಖರೀಸಲು ಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇಂಧನ ಭದ್ರತೆಗಾಗಿ ಭಾರತದ ಪ್ರಯತ್ನಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಕಾರ್ಯತಂತ್ರದ ಯೋಜನೆಯ ಭಾಗವಾಗಿ ಕಳೆದ 11 ವರ್ಷಗಳಲ್ಲಿ 53 ಲಕ್ಷ ಮೆಟ್ರಿಕ್ ಟನ್ ತೈಲ ನಿಕ್ಷೇಪವನ್ನು ರಚಿಸಲಾಗಿದೆ. ಇದನ್ನು 65 ಲಕ್ಷ ಮೆಟ್ರಿಕ್ ಟನ್‌ಗೆ ಹೆಚ್ಚಿಸಲು ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಇದಲ್ಲದೆ ಹಡುಗುಗಳನ್ನು ತಯಾರಿಸಲು ₹70,000 ಕೋಟಿಗಳ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಕೊಲ್ಲಿ ರಾಷ್ಟ್ರಗಳಿಂದ ಭಾರಿ ಪ್ರಮಾಣದಲ್ಲಿ ಕಚ್ಚಾ ತೈಲ ಹಾಗೂ ಅನಿಲ ಆಮದು ಮಾಡಿಕೊಳ್ಳುವುದರಿಂದ ಅನಿರೀಕ್ಷಿತ ಸವಾಲುಗಳು ಎದುರಾಗಿವೆ ಎಂದು ಹೇಳಿದ್ದರು. ಪಶ್ಚಿಮ ಏಷ್ಯಾ ಬಿಕ್ಕಟ್ಟು ಆತಂತಕಾರಿಯಾಗಿದ್ದು, ಜಗತ್ತಿನ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದಿದ್ದರು.

