ವಾಷ್ಟಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಜಾಗತಿಕ ಇಂಧನ ದರಗಳು ಹೆಚ್ಚುತ್ತಿರುವ ಹಿನ್ನೆಲೆ, ಸಮುದ್ರದಲ್ಲಿ ಸಿಲುಕಿರುವ ಇರಾನ್ ತೈಲದ ಮೇಲಿನ ನಿರ್ಬಂಧಗಳನ್ನು ಟ್ರಂಪ್ ಆಡಳಿತವು ಶುಕ್ರವಾರ ಸಂಜೆ ತೆಗೆದುಹಾಕಿದೆ.
ಈ ಕ್ರಮದ ಮೂಲಕ ಸಮುದ್ರದಲ್ಲಿದ್ದ ಇರಾನಿನ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡಲು ಅವಕಾಶ ನೀಡಲಾಗಿದೆ.
'ಈ ವಿನಾಯಿತಿಯು ಏ. 19 ರವರೆಗೆ ಜಾರಿಯಲ್ಲಿರಲಿದ್ದು, ಈಗಾಗಲೇ ಸಮುದ್ರದಲ್ಲಿ ಸಾಗಣೆಯಲ್ಲಿರುವ ಇರಾನ್ ತೈಲ ಬ್ಯಾರೆಲ್‌ಗಳಿಗೆ ಮಾತ್ರ ಇದು ಅನ್ವಯಿಸುತ್ತದೆ' ಎಂದು ಅಮೆರಿಕದ ಹಣಕಾಸು ಇಲಾಖೆಯ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
'ಇರಾನ್‌ನಿಂದಾಗಿ ತೈಲ ಪೂರೈಕೆಯ ಮೇಲೆ ಉಂಟಾಗಿರುವ ತಾತ್ಕಾಲಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಹೆಚ್ಚುವರಿ 140 ಮಿಲಿಯನ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲು ಈ ಕ್ರಮವು ಸಹಕಾರಿಯಾಗಲಿದೆ' ಎಂದು ಅವರು ತಿಳಿಸಿದ್ದಾರೆ.
'ಈ ತಾತ್ಕಾಲಿಕ ವಿನಾಯಿತಿಯು ಈಗಾಗಲೇ ಸಾಗಣೆಯಲ್ಲಿರುವ ತೈಲಕ್ಕೆ ಮಾತ್ರ ಸೀಮಿತವಾಗಿದೆ. ಇದು ಹೊಸ ಖರೀದಿ ಅಥವಾ ಉತ್ಪಾದನೆಗೆ ಅವಕಾಶ ನೀಡುವುದಿಲ್ಲ. ಆದ್ದರಿಂದ ಇದು ಇರಾನ್‌ಗೆ ಯಾವುದೇ ಹೆಚ್ಚಿನ ಆರ್ಥಿಕ ಪ್ರಯೋಜನ ನೀಡುವುದಿಲ್ಲ' ಎಂದಿದ್ದಾರೆ.
ಮುಂದುವರಿದು, 'ಇರಾನ್ ಮೇಲೆ ಗರಿಷ್ಠ ಒತ್ತಡ ಹೇರುವುದನ್ನು ಮತ್ತು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯನ್ನು ಅದು ಬಳಸಿಕೊಳ್ಳದಂತೆ ತಡೆಯುವುದನ್ನು ಅಮೆರಿಕ ಮುಂದುವರಿಸಲಿದೆ' ಎಂದು ಬೆಸ್ಸೆಂಟ್ ತಿಳಿಸಿದ್ದಾರೆ.

