ರಾವಲ್ಪಿಂಡಿ: ಪಾಕಿಸ್ತಾನ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಕ್ವಮರ್ ಜಾವೇದ್ ಬಜ್ವಾ ಅವರು ನಿಧನರಾಗಿದ್ದಾರೆ.
ಹಲವು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ರಾವಲ್ಪಿಂಡಿಯಲ್ಲಿರುವ ಸೇನಾ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಬಜ್ವಾ ಅವರು ಇದೇ ವರ್ಷ (2026ರ) ಫೆಬ್ರುವರಿಯಲ್ಲಿ ಸ್ನಾನಗೃಹದಲ್ಲಿ ಬಿದ್ದು, ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡಿದ್ದರು.
ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಸೇನಾ ಕಾರ್ಯಗಳಷ್ಟೇ ಅಲ್ಲದೆ, ದೇಶದ ರಾಜಕೀಯ ವಿಚಾರದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದ ಬಜ್ವಾ, ಪಾಕಿಸ್ತಾನದ ಅತ್ಯಂತ ಪ್ರಬಲ ಸೇನಾ ಮುಖ್ಯಸ್ಥರಲ್ಲಿ ಒಬ್ಬರು ಎನಿಸಿದ್ದರು. ಸರ್ಕಾರದ ಮೇಲೆ ಸೇನೆಯು ಪ್ರಭಾವ ಬೀರುತ್ತಿದೆ ಎಂಬ ಕಾರಣಕ್ಕೆ, ಬಜ್ವಾ ಅವಧಿಯು ಸುದ್ದಿಯಾಗಿತ್ತು.
2016ರ ನವೆಂಬರ್‌ನಿಂದ 2022ರ ನವೆಂಬರ್‌ವರೆಗೆ ಸೇನಾ ಪಡೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಅವರನ್ನು ಆಗಿನ ಪ್ರಧಾನಿ ನವಾಜ್ ಷರೀಫ್ ಅವರು ನೇಮಕ ಮಾಡಿದ್ದರು. ಆ ಅವಧಿಯು, ಭಾರತದೊಂದಿಗಿನ ಉದ್ವಿಗ್ನತೆ ಸೇರಿದಂತೆ, ಹಲವು ಮಹತ್ವದ ಘಟನಾವಳಿಗಳಿಗೆ ಸಾಕ್ಷಿಯಾಗಿತ್ತು. ಭಾರತೀಯ ಸೇನೆಯು ಪಾಕಿಸ್ತಾನದ ಬಾಲಕೋಟ್ ಮೇಲೆ ವಾಯುದಾಳಿ ನಡೆಸಿದ್ದೂ ಆಗಲೇ.
ಬಜ್ವಾ ನಿಧನಕ್ಕೆ ರಾಜಕೀಯ ನಾಯಕರು ಮತ್ತು ಸೇನಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.



