ಬೀಜಿಂಗ್: ಚೀನಾದ ನೃತ್ಯಗಾರರ ಗುಂಪೊಂದು ಹಿಂದೂ ಧರ್ಮದ ಮಹಾಕಾವ್ಯ ರಾಮಾಯಣದ ಕಥೆಯಾಧರಿತ 'ಆದಿ ಕಾವ್ಯ - ಮೊದಲ ಕವಿತೆ'ಎಂಬ ಹೆಸರಿನಲ್ಲಿ ನೃತ್ಯ ನಾಟಕವನ್ನು ಪ್ರದರ್ಶಿಸಿದೆ. ಪ್ರಸಿದ್ಧ ಚೀನೀ ವಿದ್ವಾಂಸ ಪ್ರೊ. ಜಿ. ಕ್ಸಿಯಾನ್ಲಿನ್ ಅವರ ರಾಮಾಯಣದ ಅನುವಾದವನ್ನು ಆಧರಿಸಿ ಈ ಪ್ರದರ್ಶನ ನೀಡಲಾಗಿದೆ.
ಚೀನೀ ಭರತನಾಟ್ಯ ಕಲಾವಿದರಾದ ಜಿನ್ ಶನ್ಶಾನ್ ನಿರ್ದೇಶಿಸಿದ ಈ ನಾಟಕವು 50ಕ್ಕೂ ಹೆಚ್ಚು ಸ್ಥಳೀಯ ಕಲಾವಿದರನ್ನು ಒಳಗೊಂಡಿತ್ತು. ಶನಿವಾರ ಭಾರತೀಯ ರಾಯಭಾರ ಕಚೇರಿಯ ಆವರಣದಲ್ಲಿ ನಡೆಯಿತು.
ನಿರ್ಗಮಿತ ಭಾರತೀಯ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಮತ್ತು ರಾಯಭಾರ ಕಚೇರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿರುವ ರಾವತ್ ಅವರ ಸ್ಥಾನವನ್ನು ಪ್ರಸ್ತುತ ಬ್ರಿಟನ್‌ನಲ್ಲಿ ಭಾರತೀಯ ರಾಯಭಾರಿಯಾಗಿರುವ ವಿಕ್ರಮ್ ದೊರೈಸ್ವಾಮಿ ವಹಿಸಿಕೊಳ್ಳಲಿದ್ದಾರೆ.
200ಕ್ಕೂ ಹೆಚ್ಚು ವಿವಿಧ ರಾಜತಾಂತ್ರಿಕ ಕಚೇರಿಗಳ ಅಧಿಕಾರಿಗಳು ಪ್ರದರ್ಶನವನ್ನು ವೀಕ್ಷಿಸಿದ್ದಾರೆ.
ಕಳೆದ ವರ್ಷ ರಾಯಭಾರ ಕಚೇರಿಯು 'ಭಾರತೀಯ ತಾತ್ವಿಕ ಸಂಪ್ರದಾಯಗಳ ಸಂಗಮ' ಎಂಬ ವಿಷಯದ ಕುರಿತು ಒಂದು ವಿಚಾರ ಸಂಕಿರಣವನ್ನು ಆಯೋಜಿಸಿತ್ತು, ಇದರಲ್ಲಿ ಚೀನಾದ ಪ್ರಸಿದ್ಧ ವಿದ್ವಾಂಸರು ಭಗವದ್ಗೀತೆ ಮತ್ತು ಭಾರತೀಯ ನಾಗರಿಕತೆಯ ಮೌಲ್ಯಗಳ ಕುರಿತು ಮಾತನಾಡಿದ್ದರು.



