ಪಾಲಕ್ಕಾಡ್ : 'ಕೇರಳದಲ್ಲಿ ಮುಂದಿನ ಸರ್ಕಾರ ರಚಿಸುವುದು ನಾವೇ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ ಇಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, 'ಕೇರಳದಲ್ಲಿ ಎನ್‌ಡಿಎ ಮೈತ್ರಿಕೂಟವು ಮುಂದಿನ ಸರ್ಕಾರ ರಚಿಸಲಿದೆ. ಇಲ್ಲಿನ ಎಲ್‌ಡಿಎಫ್ ಮತ್ತು ಯುಡಿಎಫ್ ಪರಸ್ಪರ ಒಪ್ಪಂದ ಮಾಡಿಕೊಂಡು ದಶಕಗಳಿಂದ ಕೇರಳದ ಜನರನ್ನು ಲೂಟಿ ಮಾಡುತ್ತಿವೆ.
ಇವೆರಡು ಪಕ್ಷಗಳು ದಶಕಗಳಿಂದ ನಡೆಸುತ್ತಿರುವ ಭ್ರಷ್ಟಾಚಾರ ಮತ್ತು ರಾಜಕೀಯ ಅವಕಾಶವಾದದಲ್ಲಿ ಕೇರಳದ ಜನರು ಸಿಲುಕಿಕೊಂಡಿದ್ದಾರೆ' ಎಂದು ಆರೋಪಿಸಿದರು.
'ಕೇರಳದಲ್ಲಿ ಯುವಜನರು, ಮಹಿಳೆಯರು, ಕೃಷಿಕರು ಬಿಜೆಪಿಯತ್ತ ವಾಲುತ್ತಿದ್ದು, ಬದಲಾವಣೆ ಬಯಸುತ್ತಿದ್ದಾರೆ. ಬಿಜೆಪಿಯ ಉದಯವು ಎಲ್‌ಡಿಎಫ್ ಮತ್ತು ಯುಡಿಎಫ್‌ನಲ್ಲಿ ಹಗರಣಗಳು ಹೊರಬರುವ ಭಯವನ್ನು ಹುಟ್ಟಿಸಿದೆ' ಎಂದರು.
ತ್ರಿಶ್ಯೂರ್‌ನಲ್ಲಿ ಪ್ರಧಾನಿ ರೋಡ್‌ಶೋ
ತ್ರಿಶ್ಯೂರ್: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೇರಳದ ಸಾಂಸ್ಕೃತಿಕ ರಾಜಧಾನಿ ತ್ರಿಶ್ಯೂರ್‌ನಲ್ಲಿ ವಿಧಾನಸಭಾ ಚುನಾವಣೆಯ ಅಂಗವಾಗಿ ರೋಡ್ ಶೋ ನಡೆಸಿದರು. ತ್ರಿಶ್ಯೂರ್ ಜಿಲ್ಲೆಯ ಎನ್‌ಡಿಎ ಅಭ್ಯರ್ಥಿ ಪದ್ಮಜಾ ವೇಣುಗೋಪಾಲ್ ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತಿತರರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಕುಟ್ಟನೆಲ್ಲೂರು ಹೆಲಿಪ್ಯಾಡ್‌ಗೆ ಬಂದಿಳಿದ ಪ್ರಧಾನಿ ಅವರಿಗೆ ಬಿಜೆಪಿ -ಎನ್‌ಡಿಎ ಮುಖಂಡರು ಸ್ವಾಗತ ಕೋರಿದರು.



