ಕೊಲಂಬೊ: ಪಶ್ಚಿಮ ಏಷ್ಯಾ ಸಂಘರ್ಷದಿಂದ ಇಂಧನ ಪೂರೈಕೆಯಲ್ಲಿ ಆಗಿರುವ ವ್ಯತ್ಯಯವನ್ನು ಸರಿಪಡಿಸಿಕೊಳ್ಳಲು ನೆರವಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕೆ ಭಾನುವಾರ ಧನ್ಯವಾದ ಹೇಳಿದ್ದಾರೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಹಾಗೂ ಲಂಕಾ ಐಒಸಿ (ಎಲ್‌ಐಒಸಿ) ಸಹಯೋಗದಲ್ಲಿ ತುರ್ತು ಕಾರ್ಯಾಚರಣೆ ನಡೆದಿದ್ದು, ಅದರ ಭಾಗವಾಗಿ ಒಟ್ಟು 38,000 ಮೆಟ್ರಿಕ್ ಟನ್‌ನಷ್ಟು ತೈಲ ತುಂಬಿದ್ದ ಭಾರತದ ಹಡಗು ಶನಿವಾರ ಕೊಲಂಬೊ ಬಂದರು ತಲುಪಿದೆ. ಅದರಲ್ಲಿ, 20,000 ಟನ್ ಡೀಸೆಲ್ ಹಾಗೂ 18,000 ಟನ್ ಪೆಟ್ರೋಲ್.
ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಧ್ಯಕ್ಷ, 'ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಶ್ರೀಲಂಕಾದಲ್ಲಿ ಇಂಧನ ಪೂರೈಕೆಯಲ್ಲಿ ಆಗಿರುವ ವ್ಯತ್ಯಯದ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಕೆಲವು ದಿನಗಳ ಹಿಂದಷ್ಟೇ ಮಾತನಾಡಿದ್ದೆ. ಭಾರತವು ತ್ವರಿತವಾಗಿ ನೆರವಾಗಿದ್ದಕ್ಕೆ ಧನ್ಯವಾದಗಳು. 38,000 ಮೆಟ್ರಿಕ್ ಟನ್‌ನಷ್ಟು ತೈಲ ನಿನ್ನೆಯಷ್ಟೇ ಕೊಲಂಬೊ ತಲುಪಿದೆ' ಎಂದು ತಿಳಿಸಿದ್ದಾರೆ.
ಇಂಧನ ಕೊರತೆಯಾಗದಂತೆ ನೆರವಾಗಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಜೊತೆಗೂ ಮಾತುಕತೆ ನಡೆಸಿದ್ದ ದಿಸ್ಸನಾಯಕೆ, ಅವರಿಗೂ ಧನ್ಯವಾದ ಹೇಳಿದ್ದಾರೆ.
'ನಿಕಟವಾಗಿ ಸಹಕಾರ ನೀಡಿದ ವಿದೇಶಾಂಗ ಸಚಿವ ಜೈಶಂಕರ್ ಅವರಿಗೂ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
ಪಶ್ಚಿಮ ಏಷ್ಯಾ ಹಾಗೂ ಸಿಂಗಾಪುರದ ಪೂರೈಕೆದಾರರಿಂದ ಇಂಧನೆ ಪೂರೈಕೆ ಸಾಧ್ಯವಾಗದ ಕಾರಣ, ಎಲ್‌ಐಒಸಿ ಭಾರತದಿಂದ ಸರಬರಾಜಿಗೆ ಮನವಿ ಮಾಡಿತ್ತು.
ಶ್ರೀಲಂಕಾದಾದ್ಯಂತ ತೈಲಕ್ಕಾಗಿ ಬಂಕ್‌ಗಳ ಎದುರು ಉದ್ದದ ಸಾಲುಗಳನ್ನು ತಪ್ಪಿಸುವ ಸಲುವಾಗಿ ಮಾರ್ಚ್ 15ರಿಂದಲೇ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಅದರ ಭಾಗವಾಗಿ, ಹೆಚ್ಚುವರಿ ತೈಲ ಸಂಗ್ರಹಿಸಿ ಇಟ್ಟುಕೊಳ್ಳದಂತೆ ಗ್ರಾಹಕರಿಗೆ ಸೂಚಿಸಲಾಗಿದೆ. ಆದಾಗ್ಯೂ, ನಿಯಮ ಉಲ್ಲಂಘಿಸಿದವರ ವಿರುದ್ಧ ದೇಶದಾದ್ಯಂತ ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ ಮೇ ವರೆಗೆ ಸಾಕಾಗುವಷ್ಟು ತೈಲ ಲಭ್ಯವಿದೆ ಎಂದು ಅಲ್ಲಿನ ಇಂಧನ ಸಚಿವರು ಖಚಿತಪಡಿಸಿದ್ದಾರೆ.



