ಕೋಲ್ಕತ್ತ: ಚುನಾವಣಾ ಆಯೋಗವು ಬಿಜೆಪಿಯ ಆಣತಿಯಂತೆ ರಾಜ್ಯದ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಆರೋಪಿಸಿದರು.
'ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆದಲ್ಲಿ ಅದಕ್ಕೆ ಆಯೋಗ ಮತ್ತು ಬಿಜೆಪಿಯೇ ಹೊಣೆ' ಎಂದು ಅವರು ಎಚ್ಚರಿಕೆ ನೀಡಿದರು.
ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮುಖ ಆಡಳಿತಾತ್ಮಕ ಹುದ್ದೆಗಳ ಬದಲಾವಣೆಯ ಸಮಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
'ಈದ್ ಮುನ್ನಾದಿನ ಹಿರಿಯ ಅಧಿಕಾರಿಗಳ ವರ್ಗಾವಣೆ ಮಾಡಿದ್ದೇಕೆ? ಚುನಾವಣೆಗೂ ಮುನ್ನ ಗಲಭೆ ಎಬ್ಬಿಸುವ ಹುನ್ನಾರವೇ' ಎಂದು ಪ್ರಶ್ನಿಸಿದರು.
'ಬಿಜೆಪಿಗೆ ನೆರವು ನೀಡಲೆಂದೇ ರಾಜ್ಯದ ಹೊರಗಿನ ಅಧಿಕಾರಿಗಳನ್ನು ಕರೆತರಲಾಗಿದೆ. ಆಯೋಗವು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ. ಅದು ನೇರವಾಗಿ ಬಿಜೆಪಿ ಪರ ಪ್ರಚಾರ ಮಾಡಲಿ' ಎಂದು ಹರಿಹಾಯ್ದರು.

