ಕೋಲ್ಕತ್ತ: ಪತಿಗೆ ನೆನಪು ಬರಲೆಂದು ಅವಳು ಮಾಡುತ್ತಿರುವ ಹರಸಾಹಸ ಅಷ್ಟಿಷ್ಟಲ್ಲ. ಆತನಿಗೆ ಇಷ್ಟವಾದ ಸುಗಂಧ ದ್ರವ್ಯ ಹಚ್ಚುತ್ತಾಳೆ, ಹಣೆಗೆ ಮುತ್ತಿಡುತ್ತಾಳೆ, ಕೈಹಿಡಿದು ಪ್ರೀತಿಯಿಂದ ಮಾತನಾಡಿಸುತ್ತಾಳೆ.. ಹೀಗೆ ನಿತ್ಯ ಅವರ ಜೊತೆಗೆ ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತಿರುವ ಹೆಂಡತಿ ಪ್ರೇಮಕಥೆ ಇದು.
ಪ್ರೇಮವಿವಾಹವಾಗಿದ್ದ ಆ ದಂಪತಿ ಸುಂದರವಾದ ಬದುಕು ಕಟ್ಟಿಕೊಂಡಿದ್ದರು. ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಸಂಸಾರದಲ್ಲಿ ಎಲ್ಲವೂ ಚೆನ್ನಾಗಿ ಸಾಗುತ್ತಿದೆ ಎನ್ನುವ ಹೊತ್ತಲ್ಲಿ, ವಿಧಿ ಅವರ ಬಾಳಲ್ಲಿ ಚೆಲ್ಲಾಟವಾಡಿತು. 2025ರ ಅಕ್ಟೋಬರ್ 12ರಂದು ಸಂಭವಿಸಿದ ಅಪಘಾತ ಆ ಜೋಡಿಯ ಸಂತೋಷವನ್ನೇ ಕಿತ್ತುಕೊಂಡಿತ್ತು. ಇದೀಗ ಹಾಸಿಗೆ ಹಿಡಿದಿರುವ ಪತಿಯ ಸೇವೆ ಮಾಡುತ್ತಾ ಜೀವನ ಸಾಗಿಸುತ್ತಿರುವ ಆ ಪತ್ನಿಯ ಸತತ ಪ್ರಯತ್ನಕ್ಕೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.
ಸೀಮಾ ಹಾಗೂ ಕೋಮಾದಲ್ಲಿರುವ ಪತಿ ಆಕಾಶ್
ಪಶ್ಚಿಮ ಬಂಗಾಳದ ಅಸನ್‌ಸೋಲ್‌ನ ಸೀಮಾ ಚಟರ್ಜಿ ಅವರು ಕಳೆದ ಐದು ತಿಂಗಳುಗಳಿಂದ ಕರಾಳ ದಿನಗಳನ್ನು ಅನುಭವಿಸುತ್ತಿದ್ದಾರೆ. ಸೀಮಾ ಅವರ ಪತಿ ಆಕಾಶ್ 2025ರ ಅಕ್ಟೋಬರ್ 12ರಂದು ವಿಐಪಿ ರಸ್ತೆಯ ಹಲ್ದಿರಾಮ್ ಮೋರ್ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರ ತಲೆಗೆ ಬಲವಾಗಿ ಪೆಟ್ಟು ಬಿದ್ದ ಕಾರಣ ಆಕಾಶ್ ಕೋಮಾಗೆ ಜಾರಿದ್ದರು. ಇದೊಂದು ಅಪಘಾತ ಸೀಮಾಳ ಜೀವನವನ್ನೇ ಬದಲಾಯಿಸಿತು.
ನಗುವಿನಿಂದ ಕೂಡಿದ ಆ ದಿನಗಳು ಮಾಯವಾಗಿ ಈಗ ಪತಿಯನ್ನು ಉಳಿಸಿಕೊಳ್ಳುವ ಹೋರಾಟ ಮಾಡುತ್ತಿದ್ದಾರೆ ಸೀಮಾ. ಆದರೆ ಸೀಮಾ ಅವರು ಎದೆಗುಂದದೆ ತಾಳ್ಮೆ ಮತ್ತು ದೇವರ ಮೇಲೆ ನಂಬಿಕೆಯಿಟ್ಟು ಮುನ್ನೆಡೆಯುತ್ತಿದ್ದಾರೆ. ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಸೀಮಾ ಪತಿಯನ್ನು ಸಹಜ ಸ್ಥಿತಿಗೆ ತರಲು ಹೆಣಗಾಡುತ್ತಿದ್ದಾರೆ. ಹಳೆಯ ನೆನಪು ಮರುಕಳಿಸಬಹುದೇ ಎಂಬ ಆಶಯದಿಂದ ಆಕಾಶ್‌ಗೆ ನೆಚ್ಚಿನ ಸುಗಂಧ ದ್ರವ್ಯ ಹಚ್ಚುತ್ತಾಳೆ. ಅವರ ಹಣೆಗೆ ಮುತ್ತು ನೀಡುತ್ತಾಳೆ. ಅವರ ಕೈಹಿಡಿದು ಪ್ರೀತಿಯಿಂದ ಮಾತನಾಡುತ್ತಾಳೆ. ಹೀಗೆ ನಿತ್ಯ ಅವರ ಜೊತೆಗೆ ಆಸ್ಪತ್ರೆಯಲ್ಲಿ ಕಾಲಕಳೆಯುತ್ತಿದ್ದಾರೆ.

ಸೀಮಾ ಹಾಗೂ ಕೋಮಾದಲ್ಲಿರುವ ಪತಿ ಆಕಾಶ್
ಈ ಕುರಿತು ಸೀಮಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪತಿಯ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದು, ಅದು ಎಲ್ಲರ ಗಮನ ಸೆಳೆದಿದೆ. ಹಾಸಿಗೆ ಹಿಡಿದ ಪತಿ ಜೊತೆಯೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಸಂತೋಷದ ಕ್ಷಣಗಳನ್ನು ಮರಳಿ ತರಲು ಸೀಮಾ ವಧುವಿನಂತೆ ಸಿಂಗಾರಗೊಂಡು, ಕೇಕ್ ಕತ್ತರಿಸಿ, ಹೂಗುಚ್ಛ, ಉಂಗುರವಿಟ್ಟು ಪತಿಗೆ ವಿವಾಹ ವಾರ್ಷಿಕೋತ್ಸಕ್ಕೆ ಶುಭ ಕೋರಿದ್ದಾರೆ. ಈ ಫೋಟೊಗಳನ್ನು ನೋಡಿದ ನೆಟ್ಟಿಗರು ಸೀಮಾಳ ಧೈರ್ಯ, ತಾಳ್ಮೆ ಹಾಗೂ ಪತಿಯ ಮೇಲಿನ ಅಚಲ ಪ್ರೀತಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ, 'ಆಕಾಶ್ ಬೇಗ ಗುಣಮುಖರಾಗಿ ಬನ್ನಿ' ಎಂದು ಕಮೆಂಟ್ ಮೂಲಕ ನೆಟ್ಟಿಗರು ಹಾರೈಸುತ್ತಿದ್ದಾರೆ. ಆಕೆ ಪ್ರೀತಿಗಾಗಿ ಹೋರಾಟ ಮಾಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

