ನವದೆಹಲಿ: 'ದೇಶದ ಜನರ ಅಭಿಲಾಷೆ ಈಡೇರಿಸುವುದೇ ನಮ್ಮ ಸರ್ಕಾರದ ಆದ್ಯ ಕರ್ತವ್ಯ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.
ಶಿಕ್ಷಣ, ಕೌಶಲ ಅಭಿವೃದ್ಧಿ, ಆರೋಗ್ಯ, ಪ್ರವಾಸೋದ್ಯಮ, ಕ್ರೀಡೆ ಮತ್ತು ಸಂಸ್ಕೃತಿ ವಲಯಗಳು ಜನರ ಆಕಾಂಕ್ಷೆ ಈಡೇರಿಸಲು ಮಾಧ್ಯಮವಾಗಿ ಕಾರ್ಯನಿರ್ವಹಿಸುವ ಕೆಲವು ಪ್ರಮುಖ ಕ್ಷೇತ್ರಗಳು ಎಂದು ವೆಬಿನಾರ್‌ನಲ್ಲಿ ತಿಳಿಸಿದ್ದಾರೆ.
'ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕೃತ ವಿಷಯಗಳನ್ನು ಗಮನದಲ್ಲಿ ಇರಿಸಿಕೊಂಡು ದೇಶದ ಶಿಕ್ಷಣ ಕ್ಷೇತ್ರವನ್ನು ಜಗತ್ತಿನ ಆರ್ಥಿಕತೆಗೆ ಜೋಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸಬೇಕು. ಎಐ, ಆಟೊಮೇಷನ್, ಡಿಜಿಟಲ್ ಆರ್ಥಿಕತೆಯ ಬಗ್ಗೆ ನಮ್ಮ ಗಮನವನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ' ಎಂದರು.
'ಜನರ ಅಪೇಕ್ಷೆ ಈಡೇರಿಸುವುದು ಕೇವಲ ಒಂದು ವಿಷಯವಲ್ಲ. ಆದರೆ, ಇದು ನಮ್ಮ ಸರ್ಕಾರದ ಪ್ರಮುಖ ಉದ್ದೇಶ ಮತ್ತು ನಿರ್ಣಯವಾಗಿದೆ' ಎಂದಿದ್ದಾರೆ.
'ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತವು (ಎಸ್‌ಟಿಇಎಂ, ಸ್ಟೆಮ್) ಮತ್ತೊಂದು ಪ್ರಮುಖ ವಲಯವಾಗಿದೆ. ನಮ್ಮ ಹೆಣ್ಣುಮಕ್ಕಳು ಈ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದು ಖುಷಿಯ ವಿಷಯ' ಎಂದರು.
- ನರೇಂದ್ರ ಮೋದಿ, ಪ್ರಧಾನಿದೇಶದಲ್ಲಿನ ಯುವಶಕ್ತಿಯು ಆರೋಗ್ಯಕರ ಶಿಸ್ತುಬದ್ಧವಾಗಿ ಮತ್ತು ಆತ್ಮವಿಶ್ವಾಸದಿಂದ ಇದ್ದಾಗ ಮಾತ್ರ ಅದು 'ರಾಷ್ಟ್ರೀಯ ಶಕ್ತಿ' ಆಗಲಿದೆ.
'ಆರೋಗ್ಯ ಕ್ಷೇತ್ರವನ್ನು ಬಲವರ್ಧನೆಗೊಳಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಆರೋಗ್ಯ ಸೇವೆಯನ್ನು ಹಳ್ಳಿಗಳಿಗೂ ವಿಸ್ತರಿಸಲಾಗಿದೆ. ತರಬೇತಿ ಪಡೆದ ಆರೈಕೆದಾರರು, ಹಿರಿಯ ನಾಗರಿಕರಿಗೆ ಸಹಾಯ ಮಾಡುವ 'ಆರೈಕೆ ಆರ್ಥಿಕತೆ'ಯನ್ನು ಉತ್ತೇಜಿಸಲಾಗುತ್ತಿದೆ. ಹಿರಿಯರ ಸಂಖ್ಯೆ ಹೆಚ್ಚಿದಂತೆ, ಆರೈಕೆದಾರರಿಗೆ ಬೇಡಿಕೆಯೂ ಹೆಚ್ಚಲಿದೆ' ಎಂದು ಹೇಳಿದ್ದಾರೆ.
'ಕ್ರೀಡೆಗೆ ಆದ್ಯತೆ ಕೊಟ್ಟಿದ್ದೇವೆ. ಖೇಲೋ ಇಂಡಿಯಾದಂತಹ ಯೋಜನೆಗಳು ಹೊಸ ಶಕ್ತಿ ತುಂಬಿವೆ. ಕ್ರೀಡಾ ಮೂಲಸೌಕರ್ಯ ಬಲವರ್ಧನೆಗೊಂಡಿದೆ' ಎಂದಿದ್ದಾರೆ.
ವಿವಿಧ ಸಚಿವಾಲಯಗಳು, ಇಲಾಖೆಗಳು ಹಾಗೂ ಖಾಸಗಿ ವಲಯದ ತಜ್ಞರು ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು.

