ಪೆರ್ಲ: ಎಣ್ಮಕಜೆ ಪಂಚಾಯಿತಿಯ ಕುಗ್ರಾಮವಾಗಿರುವ 18ನೇ ನಲ್ಕ ವಾರ್ಡಿನ ಪಾಪಿತ್ತಡ್ಕ-ನೀರಮೂಲೆ-ಗುರಿನೇರೋಳು ರಸ್ತೆಗೆ ಅಭಿವೃದ್ಧಿಯ ಬಾಗಿಲು ತೆರೆದುಕೊಂಡಿದೆ. ಪ್ರಸಕ್ತ ರಸ್ತೆಯ ಡಾಂಬರೀಕರಣ-ಕಾಂಕ್ರೀಟೀಕರಣಕ್ಕಾಗಿ 2026-27ನೇ ಸಾಲಿನ 'ಎಂಪಿಎಲ್ ಎಡಿಎಸ್'ಯೋಜನೆಯನ್ವಯ 30ಲಕ್ಷ ರೂ. ಮಂಜೂರುಮಾಡಿರುವ ರಾಜ್ಯಸಭಾ ನಾಮನಿರ್ದೇಶಿತ ಸದಸ್ಯೆ, ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷೆ ಡಾ. ಪಿ.ಟಿ ಉಷಾ ಈ ಬಗ್ಗೆ ಶಿಫಾರಸುಪತ್ರವನ್ನು ಸಂಬಂಧಪಟ್ಟವರಿಗೆ ಕಳುಹಿಸಿಕೊಟಟಿದ್ದಾರೆ.
ಈಗಾಗಲೇ ಕಾಮಗಾರಿಯನ್ನು ಸೂಕ್ತ ರೀತಿಯಲ್ಲಿಪರಿಶೀಲಿಸಿ ತಾಂತ್ರಿಕ, ಹಣಕಾಸು ಹಾಗೂ ಆಡಳಿತಾತ್ಮಕ ಮಂಜೂರಾತಿ ನೀಡಿ, 'ಎಂಪಿಎಲ್ ಎಡಿಎಸ್'ನಿಬಂಧನೆ ಪ್ರಕಾರ ಕಾಮಗಾರಿ ಕೈಗೆತ್ತಿಕೊಂಡು ಕಾಂಗಾರಿಗಳ ಪ್ರಗತಿಯ ಬಗ್ಗೆ ವರದಿ ಸಲ್ಲಿಸುವಂತೆ ಕೋಯಿಕ್ಕೋಡ್ ಜಿಲ್ಲಾಧಿಕಾರಿ ಸ್ನೇಹಿಲ್‍ಕುಮಾರ್ ಸಿಂಗ್ ಅವರಿಗೆ ಕಳುಹಿಸಿದ ಶಿಫಾರಸುಪತ್ರದಲ್ಲಿ ಸೂಚಿಸಲಾಗಿದೆ. ಶಿಫಾರಸುಪತ್ರದ ಪ್ರತಿಯನ್ನು ಕಾಸರಗೋಡು ಜಿಲ್ಲಾಧಿಕಾರಿ ಹಾಗೂ ಕಾಸರಗೋಡು, ಕೋಯಿಕ್ಕೋಡ್ ಜಿಲ್ಲಾ ಯೋಜನಾಧಿಕಾರಿಗಳಿಗೂ ಕಳುಹಿಸಿಕೊಡಲಾಗಿದೆ.
ಅಭಿವೃದ್ಧಿ ಮರೀಚಿಕೆಯಾಗಿರುವ ಗ್ರಾಮೀಣ ಪ್ರದೇಶವಾಗಿರುವ ನಲ್ಕದ ಪಾಪಿತ್ತಡ್ಕ-ಗುರಿನೇರೋಳು ಪ್ರದೇಶಕ್ಕೆ ರಾಜ್ಯಸಭಾ ಸದಸ್ಯೆಯೊಬ್ಬರ ಅನುದಾನ ಮಂಜೂರಾಗಿ ಲಭಿಸುವ ಮೂಲಕ ಈ ಪ್ರದೇಶದ ಜನತೆಗೆ ಸರ್ವಋತು ಸಂಚಾರದ ರಸ್ತೆ ನಿರ್ಮಾಣದ ಕನಸು ನನಸಾಗಿದೆ.
ಬಿಜೆಪಿ ಹಿರಿಯ ಮುಖಂದ, ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ಎಣ್ಮಕಜೆ ಪನಚಾಯಿತಿಗೆ ಭೇಟಿ ನಿಡಿದ್ದ ಸಂದರ್ಭ, ಎಣ್ಮಕಜೆ ಪಂಚಾಯಿತಿಯ 18ನೇ ವಾರ್ಡು ಸದಸ್ಯ ಜಗದೀಶ್ ಕುಲಾಲ್ ಅವರು ತಮ್ಮ ವಾರ್ಡಿನ ಪಾಪಿತ್ತಡ್ಕ-ನೀರಮೂಲೆ-ಗುರಿನೇರೋಳು ರಸ್ಥೆಯ ಶೋಚನೀಯವಸ್ಥೆ ಬಗ್ಗೆ ಮನವರಿಕೆ ಮಾಡಿದ್ದ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯೆ, ಡಾ.ಪಿ.ಟಿ ಉಷಾ ಅವರ ಮೂಲಕ ಈ ಮೊತ್ತ ಮಂಜೂರುಮಾಡಿಸುವಲ್ಲಿ ಶ್ರಮವಹಿಸಿದ್ದರು. ಗುರಿನೇರೋಳು ಪ್ರದೇಶದಲ್ಲಿ ಹಲವಾರು ಕುಟುಂಬಗಳು ವಾಸ್ತವ್ಯವಿದ್ದು, ಮಳೆಗಾಲದಲ್ಲಿ ಇವರ ಯಾತ್ರಾ ದುರಿತ ಹೇಳತೀರದು. ರಸ್ತೆ ಅತ್ಯಂತ ಶಿಥಿಲಗೊಳ್ಳುತ್ತಿರುವುದರಿಂದ ವಾಹನ ಚಾಲಕರು ಪ್ರಸಕ್ತ ರಸ್ತೆಯಲ್ಲಿ ಸಂಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಪ್ರಸಕ್ತ ರಸ್ತೆಯನ್ನು ಅಡ್ಕಸ್ಥಳಕ್ಕೆ ಸಂಪರ್ಕಕಲ್ಪಿಸುವ ರೀತಿಯಲ್ಲಿ ಸಮಗ್ರ ಅಭಿವೃದ್ಧಿ ನಡೆಸುವಂತೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.



