ಟೆಲ್‌ಅವೀವ್: ಗುಪ್ತಚರ ಇಲಾಖೆ ಸಚಿವ ಇಸ್ಮಾಯೀಲ್ ಖಾತಿಬ್ ಅವರನ್ನು ಮಂಗಳವಾರ ತಡರಾತ್ರಿ ನಡೆಸಿದ ದಾಳಿಯೊಂದರಲ್ಲಿ ಹತ್ಯೆಗೈಯಲಾಗಿದೆಯೆಂದು ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರಾಯೇಲ್‌ಕಾಟ್ಝ್ ತಿಳಿಸಿದ್ದಾರೆ.
ಇರಾನ್‌ನ ಉನ್ನತ ನಾಯಕರ ಹತ್ಯಾಸರಣಿಯನ್ನು ಇಸ್ರೇಲ್ ಮುಂದುವರಿಸಿದ್ದು, ಕಳೆದ ಎರಡು ದಿನಗಳಲ್ಲಿ ನಡೆದಿರುವ ಇರಾನ್‌ನ ಮೂರನೇ ಉನ್ನತ ನಾಯಕನ ಹತ್ಯೆ ಇದಾಗಿದೆ.
ಮಂಗಳವಾರ ಇಸ್ರೇಲ್ ಇರಾನ್‌ನ ಭದ್ರತಾ ವರಿಷ್ಠ ಅಲಿ ಲಾರಿಜಾನಿ ಹಾಗೂ ಬಾಸ್ಜಿ ಸ್ವಯಂಸೇವಕ ಪಡೆಯ ವರಿಷ್ಠ ಗುಲಾಮ್‌ರೆಝಾ ಸೊಲೈಮಾನಿ ಅವರನ್ನು ಕ್ಷಿಪ್ರದಾಳಿಯೊಂದರಲ್ಲಿ ಹತ್ಯೆಗೈದಿತ್ತು.
ಇಸ್ರೇಲ್‌ನ ಹಿಟ್‌ಲಿಸ್ಟ್‌ನಲ್ಲಿರುವ ಇರಾನ್ ಸರಕಾರದ ಯಾವುದೇ ಉನ್ನತ ಅಧಿಕಾರಿಯನ್ನು ಹೆಚ್ಚುವರಿ ಅನುಮತಿ ಪಡೆಯದೇ ಹತ್ಯೆಗೈಯಲು ಪ್ರಧಾನಿ ಬೆಂಜಮೀನ್ ನೆತನ್ಯಾಹು ಅವರು ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆಂದು ಕಾಟ್ಝ್ ಹೇಳಿದ್ದಾರೆ.
ಇರಾನ್-ಇರಾಕ್ ಯುದ್ಧದಲ್ಲಿ ಐಆರ್‌ಜಿಸಿ ಯೋಧರಾಗಿದ್ದ ಖಾತಿಬ್
ಖಾತಿಬ್ ಅವರು ಶಿಯಾ ಧಾರ್ಮಿಕ ಮುಖಂಡರೂ ಆಗಿದ್ದು, ಇರಾನ್‌ನ ನ್ಯಾಯಾಂಗ ಹಾಗೂ ಗುಪ್ತಚರ ಸಚಿವಾಲಯದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. 1980ರ ದಶಕದ ಇರಾನ್-ಇರಾಕ್ ಯುದ್ಧದ ಅವಧಿಯಲ್ಲಿ ಐಆರ್‌ಜಿಸಿ ಯೋಧರಾಗಿ ಕಾರ್ಯನಿರ್ವಹಿಸಿದ್ದರು ಹಾಗೂ ಘರ್ಷಣೆಯೊಂದರಲ್ಲಿ ಗಾಯಗೊಂಡಿದ್ದರು.
ಖಾತಿಬ್ ಅವರು ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳ ವಿರುದ್ಧ ಸೈಬರ್ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದರೆಂದು ಆರೋಪಿಸಿ 2022ರಲ್ಲಿ ಅಮೆರಿಕವು ಖಾತಿಬ್ ಅವರಿಗೆ ನಿರ್ಬಂಧಗಳನ್ನು ವಿಧಿಸಿತ್ತು.
ಇರಾನ್‌ನ ರಾಜಕೀಯ ಗುರಿಗಳಿಗೆ ಬೆಂಬಲವಾಗಿ ಸೈಬರ್ ಬೇಹುಗಾರಿಕೆ ಹಾಗೂ ರ್ಯಾನ್ಸಮ್‌ವೇರ್ ದಾಳಿಗಳನ್ನು ನಡೆಸುವ ಹಲವಾರು ಜಾಲಗಳನ್ನು ಖಾತಿಬ್ ಅವರು ನಿರ್ದೇಶಿಸುತ್ತಿದ್ದರು ಎಂದು ಇಸ್ರೇಲ್ ಆಪಾದಿಸಿದೆ. ಅಲ್ಬೇನಿಯನ್ ಸರಕಾರದ ವೆಬ್‌ಸೈಟ್‌ಗಳನ್ನು ಬಾಧಿಸಿದ ಸೈಬರ್ ಚಟುವಟಿಕೆಯನ್ನು ನಡೆಸಿರುವುದರ ಜೊತೆಗೆ ಅಲ್ಬೇನಿಯ ಸರಕಾರದ ದಾಖಲೆಗಳು ಹಾಗೂ ಅಲ್ಬೇನಿಯ ನಿವಾಸಿಗಳದ್ದನ್ನೆಲಾದವರ ವೈಯಕ್ತಿಕ ದಾಖಲೆಗಳನ್ನು ಸೋರಿಕೆ ಮಾಡುವಲ್ಲಿ ಖಾತಿಬ್ ಅವರ ಬೇಹುಗಾರಿಕಾ ಸಚಿವಾಲಯ ಮುಖ್ಯ ಪಾತ್ರ ವಹಿಸಿತ್ತೆಂದು ಆಪಾದಿಸಲಾಗಿತ್ತು.
ಇರಾನ್‌ನ ನಾಯಕರ ಯೋಜಿತ ಹತ್ಯೆಗಳನ್ನು ನಡೆಸುತ್ತಿರುವುದಕ್ಕಾಗಿ ಇಸ್ರೇಲ್ ವಿರುದ್ಧ ತುರ್ಕಿಯೆ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದು, ಇದು ಯುದ್ಧದ ಸಾಮಾನ್ಯ ನಿಯಮಗಳ ವ್ಯಾಪ್ತಿಗೆ ಹೊರತಾದ ಅಕ್ರಮ ಚಟುವಟಿಕೆಗಳಾಗಿವೆ ಎಂದು ತುರ್ಕಿಯೆ ವಿದೇಶಾಂಗ ಸಚಿವ ಹಕಾನ್ ಫಿದಾನ್ ಅವರು ತಿಳಿಸಿದ್ದಾರೆ.

