ಬದಿಯಡ್ಕ: ದೇವಾಲಯಗಳನ್ನು ಜೀಣೋ9ದ್ಧಾರ ಮಾಡುವುದರಿಂದ ಮನುಷ್ಯನ ಜೀವನವು ಸಾರ್ಥಕತೆಯನ್ನು ಪಡೆದು ಪರಿಪೂರ್ಣವಾಗುತ್ತದೆ. ಎಲ್ಲರೂ ಕೈಬಿಟ್ಟ ಪರಿಸ್ಥಿತಿಯಲ್ಲಿ ನಮ್ಮನ್ನು ಉದ್ಧರಿಸುವುದು ದೇವತಾ ಶಕ್ತಿಗಳು ಮಾತ್ರ ಎಂದು ಪಾತೇರಿ ಕ್ಷೇತ್ರದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಹೇಳಿದರು.
ಬೀಳುವವನನ್ನು ಮೇಲ್ಮಟ್ಟಕ್ಕೆ ಏರಿಸುವವನು ಪಾತೇರಿ ಶಂಕರನಾರಾಯಣ ದೇವರು. ಭಕ್ತರ ಮನಸ್ಸು ದೇವರಿಗೆ ಸಮರ್ಪಿತವಾಗಲು ಎಲ್ಲ ರೀತಿಯಲ್ಲೂ ವೇದಿಕೆ ಸಿದ್ಧಗೊಂಡಿದೆ. ಹೊಸ ಸಂವತ್ಸರದ ಪ್ರಾರಂಭದಲ್ಲಿ ವಿಘ್ನವಿನಾಶಕ ಗಣಪತಿಯ ಚತುರ್ಥಿ ದಿನವೇ ಜೀರ್ಣೋದ್ದಾರ ಕಾರ್ಯಕ್ಕಿರುವ ಶಿಲೆಯು ಶ್ರೀ ಕ್ಷೇತ್ರಕ್ಕೆ ಆಗಮಿಸಿದೆ. ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಆದಷ್ಟು ಬೇಗ ಪೂರ್ತಿಗೊಳಿಸಿ ಬ್ರಹ್ಮಕಲಶೋತ್ಸವವನ್ನು ನಡೆಸುವ ಸೌಭಾಗ್ಯವನ್ನು ಭಗವಂತನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದರು.
ಅವರು ಇತ್ತೀಚೆಗೆ ಪಾತೇರಿ ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪದ ನಿರ್ಮಾಣಕ್ಕಾಗಿ ಕರ್ನಾಟದ ಶಿಲ್ಪಿಗಳಿಂದ ವಿಶೇಷವಾಗಿ ಕೆತ್ತಲ್ಪಟ್ಟ ಕೃಷ್ಣಶಿಲೆಯು ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ನೆರೆದ ಭಕ್ತವೃಂದಕ್ಕೆ ಆಶೀರ್ವಚನವನ್ನು ನೀಡಿ ಮಾತನಾಡುತ್ತಿದ್ದರು.
ಬೆಳಗ್ಗೆ ಕ್ಷೇತ್ರಕ್ಕೆ ತಲುಪಿದ ದೇಲಂಪಾಡಿ ಗಣೇಶ ತಂತ್ರಿ ಹಾಗೂ ದೇಲಂಪಾಡಿ ಶ್ರೀಧರ ತಂತ್ರಿಗಳನ್ನು ಶ್ರೀ ಕ್ಷೇತ್ರದ ಮೊಕ್ತೇಸರರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಪದಾಧಿಕಾರಿಗಳು ಹಾಗೂ ಊರ ಪರವೂರ ಭಕ್ತವೃಂದ ಗೌರವಪೂರ್ವಕವಾಗಿ ಪೂರ್ಣಕುಂಭ ಸ್ವಾಗತವನ್ನು ನೀಡಿ ಶ್ರೀ ಕ್ಷೇತ್ರಕ್ಕೆ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಬಗ್ಗೆ ಬರೆದ ಭಕ್ತಿಪೂರಿತವಾದ ಕವನವನ್ನು ಕಾಸರಗೋಡಿನ ಕಿಮ್ಸ್ ಆಸ್ಪತ್ರೆಯ ಪ್ರಖ್ಯಾತ ಮೂಳೆ ತಜ್ಞರಾಗಿದ್ದ ಡಾ. ಅನಂತ ಪದ್ಮನಾಭ ಭಟ್ ಅವರು ವಾಚಿಸಿದರು.
ಶ್ರೀ ಕ್ಷೇತ್ರಕ್ಕೆ ಕೃಷ್ಣಶಿಲೆಯ ಆಗಮನದ ಸಂದರ್ಭದಲ್ಲಿ ಎ.ಪಿ ಸರ್ಕಲಿನ ಶ್ರೀಧರ್ಮಶಾಸ್ತಾ ಭಜನ ಮಂದಿರದಲ್ಲಿ ನಡೆದ ಪುಷ್ಟಾರ್ಚನಾ ಕಾರ್ಯಕ್ರಮಕ್ಕಿಂತ ಮೊದಲು ಕಗ್ಗಲ್ಲಿನ ಶಿಲ್ಪಿ ಉಪ್ಪಿನಂಗಡಿಯ ವಿಜಯ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಬಳಿಕ ಪಾತೇರಿ ಕ್ಷೇತ್ರದಲ್ಲಿ ನಡೆದ ಧಾರ್ಮಿಕ, ವೈದಿಕ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತ ಜನರು ಉಪಸ್ಥಿತರಿದ್ದರು. ಏ. 10 ರಂದು ಶುಕ್ರವಾರ ಶ್ರೀಕ್ಷೇತ್ರದಲ್ಲಿ ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ತಿಳಿಸಿದೆ.

.jpg)
.jpg)
