ತಿರುವನಂತಪುರಂ: ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ಚುನಾವಣಾ ಆಯೋಗ ಎಪ್ರಿಲ್ 9ರಂದು ನಡೆಯಲಿರುವ ಚುನಾವಣೆಗೆ ಸಿದ್ಧತೆಯ ಭಾಗವಾಗಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳನ್ನು ಮಂಗಳವಾರ ವರ್ಗಾವಣೆ ಮಾಡಿದೆ.
ಬದಲಾವಣೆಗಳ ಭಾಗವಾಗಿ ಟಿ. ನಾರಾಯಣನ್ ಅವರನ್ನು ಕೋಝಿಕ್ಕೋಡ್‌ನ ಜಿಲ್ಲಾ ಪೊಲೀಸ್ ವರಿಷ್ಠರನ್ನಾಗಿ ನಿಯೋಜಿಸಲಾಗಿದೆ. ಥೋಮ್ಸನ್ ಜಾರ್ಜ್ ತ್ರಿಶೂರ್ ವಲಯದ ಡಿಐಜಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಕೆ. ಇನ್ಬಶೇಖರ್ ಅವರನ್ನು ಆಲಪ್ಪುಳದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಕೇರಳ ಆಡಳಿತಾತ್ಮಕ ಸೇವೆ (ಕೆಎಎಸ್)ಯ ಅಧಿಕಾರಿಗಳಲ್ಲಿ ವಂದನಾ ಎಸ್ ಅವರನ್ನು ತಳಿಪರಂಬದ ಕಂದಾಯ ವಿಭಾಗದ ಅಧಿಕಾರಿ (ಆರ್‌ಡಿಒ)ಯಾಗಿ ನಿಯೋಜಿಸಲಾಗಿದೆ. ಅವರು ಇರಿಕ್ಕುರ್ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ಕೂಡ ಕಾರ್ಯ ನಿರ್ವಹಿಸಲಿದ್ದಾರೆ. ಸಚಿನ್ ಕೃಷ್ಣ ಅವರನ್ನು ಕಣ್ಣೂರಿನ ಜಿಲ್ಲಾ ರಿಜಿಸ್ಟ್ರಾರ್ ಜನರಲ್ ಆಗಿ ನಿಯೋಜಿಸಲಾಗಿದೆ. ಅವರು ಧರ್ಮಡಮ್ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸಲಿದ್ದಾರೆ.
ರಾಜ್ಯದ ಚುನಾವಣಾ ಸಿದ್ಧತೆಯ ಪರಿಶೀಲನೆಯ ಬಳಿಕ ಚುನಾವಣಾ ಆಯೋಗ ಮುಖ್ಯ ಕಾರ್ಯದರ್ಶಿ ಅವರಿಗೆ ಈ ನಿರ್ದೇಶನಗಳನ್ನು ನೀಡಿದೆ. ಈ ನಿಯೋಜನೆಯನ್ನು ತತ್‌ಕ್ಷಣದಿಂದ ಜಾರಿಗೆ ತರುವಂತೆ ರಾಜ್ಯ ಸರಕಾರಕ್ಕೆ ಸೂಚಿಸಲಾಗಿದೆ.
ಅಧಿಕಾರಿಗಳು ತಮ್ಮ ಹೊಸ ಹುದ್ದೆಯ ಅಧಿಕಾರ ವಹಿಸಿಕೊಂಡಿರುವುದನ್ನು ದೃಢೀಕರಿಸುವ ಅನುಸರಣಾ ವರದಿಯನ್ನು ಮಾಚ್ 18ರಂದು ಪೂರ್ವಾಹ್ನ 11ರ ಒಳಗೆ ಸಲ್ಲಿಸಬೇಕು ಎಂದು ಇಸಿಐ ನಿರ್ದೇಶನ ನೀಡಿದೆ.

