ಹಲವಾರು ದಶಕಗಳ ಕಾಲ, ಪಾಕಿಸ್ತಾನ ಅಫ್ಘಾನಿಸ್ತಾನದ ತಾಲಿಬಾನ್ ಸಂಘಟನೆಗೆ ಬಹಳ ಹೆಮ್ಮೆಯಿಂದ ಪೋಷಕನ ಪಾತ್ರ ನಿರ್ವಹಿಸಿತ್ತು. 1990ರ ದಶಕದ ಆರಂಭದಲ್ಲಿ, ಪಾಕಿಸ್ತಾನ ತಾಲಿಬಾನ್ ಸಂಘಟನೆಯನ್ನು ಸ್ಥಾಪಿಸಲು ನೆರವಾಗಿ, ಅದಕ್ಕೆ ನಿರಂತರ ಧನ ಸಹಾಯ ಒದಗಿಸಿತ್ತು. ಆ ಮೂಲಕ ತನ್ನ ಪಶ್ಚಿಮ ಭಾಗದಲ್ಲಿ ಒಂದು ಸ್ನೇಹಿತ ಸರ್ಕಾರವನ್ನು ಹೊಂದುವುದು ಪಾಕಿಸ್ತಾನದ ಉದ್ದೇಶವಾಗಿತ್ತು.
ಪಾಕಿಸ್ತಾನದ ಆಲೋಚನೆ ಏನೋ ಸರಳವಾಗಿತ್ತು. ಒಂದು ವೇಳೆ ಅಫ್ಘಾನಿಸ್ತಾನ ಏನಾದರೂ ತನ್ನ ಪರವಾಗಿದ್ದರೆ, ಆಗ ತಾನು ಶತ್ರುಗಳಿಂದ ಸುತ್ತುವರಿದಿರುವುದಿಲ್ಲವಲ್ಲ ಎಂದು ಪಾಕಿಸ್ತಾನ ಯೋಜಿಸಿತ್ತು. ಪಾಕಿಸ್ತಾನ ಇದನ್ನು 'ಸ್ಟ್ರಾಟೆಜಿಕ್ ಡೆಪ್ತ್' ಎಂದು ಕರೆದು, ಅಫ್ಘಾನಿಸ್ತಾನವನ್ನು ತನ್ನ ಹಿತ್ತಲಾಗಿ ಬಳಸುವ ಗುರಿ ಹೊಂದಿತ್ತು. ಆದರೆ, ಪಾಕಿಸ್ತಾನ ಬೆಳೆಸಿದ ತಾಲಿಬಾನ್ ಎಂಬ ಅದೇ ಮಗು ಪಾಕಿಸ್ತಾನದ ವಿರುದ್ಧವೇ ತಿರುಗಿ ಬಿದ್ದಿದೆ. ಈಗ ಪಾಕಿಸ್ತಾನ - ತಾಲಿಬಾನ್ ಸಂಬಂಧ ನಿಜಕ್ಕೂ ಸ್ಫೋಟಿಸುವ ಹಂತಕ್ಕೆ ತಲುಪಿದೆ.
ಮಾರ್ಚ್ 16ರ ರಾತ್ರಿ, ಪಾಕಿಸ್ತಾನ ಅಫ್ಘಾನಿಸ್ತಾನದ ರಾಜಧಾನಿಯಾದ ಕಾಬೂಲ್ ಮೇಲೆ ವಾಯು ದಾಳಿ ನಡೆಸಿತು. ಈ ದಾಳಿಯಲ್ಲಿ, ಮಾದಕ ವ್ಯಸನ ವರ್ಜನೆಯ ಆಸ್ಪತ್ರೆಯೂ ತುತ್ತಾಗಿದ್ದು, ಇದರಲ್ಲಿ ಕನಿಷ್ಠ 400 ಜನರು ಸಾವಿಗೀಡಾಗಿ, 250 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ತಾಲಿಬಾನ್ ಹೇಳಿದೆ. ಪಾಕಿಸ್ತಾನ ಈ ಆರೋಪವನ್ನು ಅಲ್ಲಗಳೆದಿದ್ದು, ತಾನು ಭಯೋತ್ಪಾದಕರಿಗೆ ಸಂಬಂಧಿಸಿದ ಮಿಲಿಟರಿ ನೆಲೆಗಳ ಮೇಲೆ ಮಾತ್ರವೇ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಆದರೆ, ಅಫ್ಘಾನಿಸ್ತಾನಿ ಜೀವಗಳು ಮತ್ತು ಉಭಯ ದೇಶಗಳ ಸಂಬಂಧಕ್ಕೆ ಇದು ಈಗಾಗಲೇ ಹಾನಿ ಉಂಟುಮಾಡಿತ್ತು.
ಹಾಗೆಂದು ಇದೇನು ಏಕಾಏಕಿ ನಡೆದಿರುವ ಕದನವಲ್ಲ. ಪಾಕಿಸ್ತಾನದ ರಕ್ಷಣಾ ಸಚಿವರೇ ಕಳೆದ ತಿಂಗಳು ಎರಡು ಇಸ್ಲಾಮಿಕ್ ದೇಶಗಳ ನಡುವೆ ನಡೆಯುತ್ತಿರುವ ಚಕಮಕಿ ಈಗ ಮುಕ್ತ ಯುದ್ಧದ ಸ್ವರೂಪ ಪಡೆದುಕೊಂಡಿದೆ ಎಂದು ಹೇಳಿಕೆ ನೀಡಿದ್ದರು. ಕೇವಲ ಫೆಬ್ರವರಿ ತಿಂಗಳಲ್ಲೇ ಪಾಕಿಸ್ತಾನ ತಾಲಿಬಾನ್ ಮಿಲಿಟರಿ ಪೋಸ್ಟ್‌ಗಳು, ಮುಖ್ಯ ಕಚೇರಿಗಳು, ಮತ್ತು ಆಯುಧ ಸಂಗ್ರಹಾಗಾರಗಳನ್ನು ಗುರಿಯಾಗಿಸಿ, ಗಡಿಗೆ ಸನಿಹವಿರುವ ಪ್ರಮುಖ ಅಫ್ಘನ್ ನಗರಗಳ ಮೇಲೆ ಹಲವಾರು ವಾಯುದಾಳಿಗಳನ್ನು ನಡೆಸಿತ್ತು.
ಒಂದು ಕಾಲದಲ್ಲಿ ಪರಸ್ಪರ ಆತ್ಮೀಯ ಮಿತ್ರರಾಗಿದ್ದ ಈ ನೆರೆ ರಾಷ್ಟ್ರಗಳು ಈಗೇಕೆ ಪರಸ್ಪರರ ಕತ್ತು ಹಿಸುಕಲು ಮುಂದಾಗಿವೆ?
2021ರಲ್ಲಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮರಳಿ ಅಧಿಕಾರಕ್ಕೆ ಬಂದಾಗ, ಪಾಕಿಸ್ತಾನಕ್ಕೆ ನಿಜಕ್ಕೂ ಸಂತೋಷವಾಗಿತ್ತು. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಂತೂ ಇದನ್ನು ಬಹಿರಂಗವಾಗಿಯೇ ಸಂಭ್ರಮಿಸಿದ್ದರು. ಆದರೆ, ಆ ಸಂತೋಷ ಬಲುಬೇಗನೆ ಪಾಕಿಸ್ತಾನದ ಪಾಲಿಗೆ ಹತಾಶೆಯಾಗಿ ಬದಲಾಯಿತು.
ಪಾಕಿಸ್ತಾನದ ಬಹುದೊಡ್ಡ ಆರೋಪ ಇರುವುದು ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್, ಅಥವಾ ಟಿಟಿಪಿ ಎನ್ನುವ ಸಂಘಟನೆಯ ಕುರಿತು. ಇದನ್ನು ಪಾಕಿಸ್ತಾನಿ ತಾಲಿಬಾನ್ ಎಂದೂ ಕರೆಯಲಾಗುತ್ತದೆ. 2007ರಲ್ಲಿ ಸ್ಥಾಪನೆಯಾದ ಟಿಟಿಪಿ, ಪಾಕಿಸ್ತಾನದ ಒಳಗೆ ಮಾರುಕಟ್ಟೆಗಳು, ಮಸೀದಿಗಳು, ವಿಮಾನ ನಿಲ್ದಾಣಗಳು, ಮತ್ತು ಮಿಲಿಟರಿ ನೆಲೆಗಳಂತಹ ಪ್ರದೇಶಗಳ ಮೇಲೆ ಹಲವು ಅತ್ಯಂತ ಭೀಕರ ದಾಳಿಗಳನ್ನು ನಡೆಸಿದೆ. 2012ರಲ್ಲಿ, ಟಿಟಿಪಿ ಮಲಾಲಾ ಯೂಸುಫ್‌ಜೈ ಎನ್ನುವ ಶಾಲಾ ಬಾಲಕಿಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಅದೃಷ್ಟವಶಾತ್ ಮಲಾಲಾ ಬದುಕುಳಿದು, ವಿದೇಶದಲ್ಲಿ ಚಿಕಿತ್ಸೆ ಪಡೆದು, ಬಾಲಕಿಯರ ಶಿಕ್ಷಣಕ್ಕಾಗಿ ಹೋರಾಟ ನಡೆಸಿದ್ದಕ್ಕಾಗಿ 2014ರಲ್ಲಿ ನೊಬೆಲ್ ಶಾಂತಿ ಪುರಸ್ಕಾರವನ್ನೂ ಪಡೆದಳು.
ಟಿಟಿಪಿ ಹೋರಾಟಗಾರರು ಅಫ್ಘಾನಿಸ್ತಾನದಲ್ಲಿ ಸುರಕ್ಷಿತವಾಗಿ ಬಚ್ಚಿಟ್ಟುಕೊಂಡಿದ್ದಾರೆ ಎಂದು ಪಾಕಿಸ್ತಾನ ಭಾವಿಸಿದೆ. ಅವರಿಗೆ ಅಫ್ಘನ್ ತಾಲಿಬಾನ್ ಒಂದೋ ರಕ್ಷಣೆ ನೀಡುತ್ತಿದೆ, ಅಥವಾ ಅವರ ಕುರಿತು ಚಕಾರವೆತ್ತದೆ ಸುಮ್ಮನಾಗಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕಿಸ್ತಾನದ ನೈಋತ್ಯ ಭಾಗದಲ್ಲಿರುವ ದೊಡ್ಡ ಪ್ರದೇಶವಾದ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಹಲವು ಸಶಸ್ತ್ರ ಸಂಘಟನೆಗಳು ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಅಫ್ಘಾನಿಸ್ತಾನವನ್ನು ತಮ್ಮ ನೆಲೆಯಾಗಿ ಬಳಸಿಕೊಳ್ಳುತ್ತಿವೆ ಎಂದು ಪಾಕಿಸ್ತಾನ ಹೇಳಿದೆ. 2022ರ ಬಳಿಕ, ಪ್ರತಿವರ್ಷವೂ ಹಿಂಸಾಚಾರ ಹೆಚ್ಚಾಗುತ್ತಲೇ ಸಾಗಿದೆ.
ಆದರೆ, ಇನ್ನೊಂದೆಡೆ ಅಫ್ಘಾನಿಸ್ತಾನ ಇವೆಲ್ಲ ಆರೋಪಗಳನ್ನು ನೇರವಾಗಿ ತಳ್ಳಿ ಹಾಕಿದೆ. ತಾನು ಅಫ್ಘಾನಿಸ್ತಾನದ ನೆಲವನ್ನು ಯಾರಿಗೂ ಪಾಕಿಸ್ತಾನದ ವಿರುದ್ಧ ಬಳಸಿಕೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಈಗ ತಾಲಿಬಾನ್ ಸಹ ಪಾಕಿಸ್ತಾನದ ವಿರುದ್ಧ ಆರೋಪ ಹೊರಿಸಿದ್ದು, ತಾಲಿಬಾನ್ ಸಂಘಟನೆಯ ವಿರೋಧಿಯಾಗಿರುವ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಹೋರಾಟಗಾರರಿಗೆ ಪಾಕಿಸ್ತಾನ ಆಶ್ರಯ ನೀಡಿದೆ ಎಂದಿದೆ. ಆದರೆ, ಪಾಕಿಸ್ತಾನವೂ ಈ ಆರೋಪವನ್ನು ನಿರಾಕರಿಸಿದೆ.
ಉಭಯ ದೇಶಗಳೂ ಈಗ ಪರಸ್ಪರರ ವಿರುದ್ಧ ಬೆರಳು ತೋರುತ್ತಿದ್ದು, ಪರಸ್ಪರರ ನಡುವಿನ ನಂಬಿಕೆ, ವಿಶ್ವಾಸ ಕುಸಿದು ಹೋಗಿದೆ. ಮಾತುಕತೆಗಳ ಜಾಗದಲ್ಲಿ ಮದ್ದುಗುಂಡುಗಳು, ಬಾಂಬುಗಳೇ ಸದ್ದು ಮಾಡುತ್ತಿವೆ.
ಡ್ಯುರಾಂಡ್ ರೇಖೆ - ಎಂದಿಗೂ ವಾಸಿಯಾಗದ 130 ವರ್ಷ ಹಳೆಯ ಗಾಯ
ಈ ಗಡಿ ಏಕೆ ಇಷ್ಟು ಉದ್ವಿಗ್ನವಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕಾದರೆ, ನಾವು ಮೊದಲಿಗೆ ಡ್ಯುರಾಂಡ್ ರೇಖೆಯನ್ನು ಅರ್ಥ ಮಾಡಿಕೊಳ್ಳಬೇಕು. 1893ರಲ್ಲಿ, ಸರ್ ಮಾರ್ಟಿಮರ್ ಡ್ಯುರಾಂಡ್ ಅವರು ಬ್ರಿಟಿಷ್ ಇಂಡಿಯಾ ಮತ್ತು ಅಫ್ಘಾನಿಸ್ತಾನವನ್ನು ಪ್ರತ್ಯೇಕಿಸಲು ಪರ್ವತ ಪ್ರದೇಶಗಳ ಮೂಲಕ ಒಂದು ರೇಖೆಯನ್ನು ಗುರುತಿಸಿದರು. ಇದರಿಂದ ಉಂಟಾದ ಸಮಸ್ಯೆ? ಈ ರೇಖೆ ಪಶ್ತೂನ್ ಬುಡಕಟ್ಟಿನ ಭೂಮಿಯ ನಡುವಿನಿಂದ ಸಾಗಿ ಹೋಗಿ, ಕುಟುಂಬಗಳು, ಹಳ್ಳಿಗಳು, ಮತ್ತು ಸಮುದಾಯಗಳನ್ನು ಎರಡು ಪ್ರತ್ಯೇಕ ದೇಶಗಳಾಗಿ ವಿಭಜಿಸಿತು.
1947ರಲ್ಲಿ ಪಾಕಿಸ್ತಾನ ನಿರ್ಮಾಣಗೊಂಡಾಗ, ಅದು ಸಹಜವಾಗಿಯೇ ಇದೇ ಗಡಿಯನ್ನು ಒಳಗೊಂಡಿತ್ತು. ಆದರೆ, ಅಫ್ಘಾನಿಸ್ತಾನ ಮಾತ್ರ ಎಂದಿಗೂ ಅಧಿಕೃತವಾಗಿ ಡ್ಯುರಾಂಡ್ ರೇಖೆಯನ್ನು ಗಡಿ ಎಂದು ಒಪ್ಪಿಕೊಂಡಿರಲಿಲ್ಲ. ಅಫ್ಘಾನಿಸ್ತಾನ ಡ್ಯುರಾಂಡ್ ರೇಖೆಯನ್ನು ಒಂದು ಗಾಯ ಎಂದೇ ಪರಿಗಣಿಸುತ್ತದೆ. ಇದು ಅಫ್ಘಾನಿಸ್ತಾನಕ್ಕೆ ತನ್ನ ಅನುಮತಿಯೇ ಇಲ್ಲದೆ, ವಸಾಹತುಶಾಹಿ ಶಕ್ತಿಗಳು ತನ್ನ ಜನರನ್ನು ಪ್ರತ್ಯೇಕಿಸಿದ್ದನ್ನು ನೆನಪಿಸುತ್ತದೆ.
ಇಂದು ಈ ಗಡಿ ಜಗತ್ತಿನ ಅತ್ಯಂತ ವಿವಾದಾತ್ಮಕ ಮತ್ತು ಹಿಂಸಾತ್ಮಕ ಗಡಿಗಳಲ್ಲಿ ಒಂದಾಗಿದೆ. ಪಾಕಿಸ್ತಾನ ಇದರ ಭಾಗಗಳಾದ್ಯಂತ ಬೇಲಿಗಳನ್ನು ನಿರ್ಮಿಸಿದ್ದು, ನಿರಂತರವಾಗಿ ಬೇಲಿ ಮುಚ್ಚುತ್ತಿರುತ್ತದೆ. ಇದರ ಪರಿಣಾಮವಾಗಿ, ಗಡಿಯ ಆಚೆ ಈಚೆ ಚಲಿಸುವುದರಿಂದಲೇ ಜೀವನ ಸಾಗಿಸುವ ಅನಿವಾರ್ಯತೆ ಹೊಂದಿರುವ ಸಾವಿರಾರು ವ್ಯಾಪಾರಿಗಳು ಮತ್ತು ಜನ ಸಾಮಾನ್ಯರಿಗೆ ತೊಂದರೆ ಉಂಟಾಗುತ್ತದೆ. ತಾಲಿಬಾನ್ ಈ ಬೇಲಿಯನ್ನು ಅಧಿಕೃತವಾಗಿ ಒಪ್ಪಿಕೊಳ್ಳಲು ಸ್ಪಷ್ಟವಾಗಿ ನಿರಾಕರಿಸಿದೆ. ಅವರು ಆರಂಭದಿಂದಲೇ ನ್ಯಾಯಯುತವಾಗಿರದ ಒಂದು ಗಡಿಯನ್ನು ಶಾಶ್ವತವಾಗಿ ಹೇರಲು ಪಾಕಿಸ್ತಾನ ಪ್ರಯತ್ನ ನಡೆಸುತ್ತಿದೆ ಎಂದು ಭಾವಿಸಿದ್ದಾರೆ.
ಪ್ರತಿಯೊಂದು ಗಡಿ ಚಕಮಕಿ, ಪ್ರತಿಯೊಂದು ಮಿಲಿಟರಿ ನೆಲೆಯ ಮೇಲಿನ ದಾಳಿ, ಪ್ರತಿಯೊಂದು ವಾಯು ದಾಳಿ, ಇವೆಲ್ಲವೂ ತಮ್ಮ ಹಿನ್ನೆಲೆಯಲ್ಲಿ ಡ್ಯುರಾಂಡ್ ರೇಖೆಯ ಭೂತವನ್ನು ಹೊತ್ತಿವೆ.
ಇನ್ನು ಮುಂದೆ ಏನಾಗಲಿದೆ?
ಮಿಲಿಟರಿ ಅಂಕಿ ಸಂಖ್ಯೆಗಳು ಸಂಪೂರ್ಣ ಕಥೆಯನ್ನು ಹೇಳುವುದಿಲ್ಲ. ಪಾಕಿಸ್ತಾನದ ಬಳಿ 6,00,000 ಸಕ್ರಿಯ ಯೋಧರು, 6,000ಕ್ಕೂ ಹೆಚ್ಚು ಸಶಸ್ತ್ರ ವಾಹನಗಳು, 400ಕ್ಕೂ ಹೆಚ್ಚು ಯುದ್ಧ ಏರ್‌ಕ್ರಾಫ್ಟ್‌ಗಳು, ಮತ್ತು ಪರಮಾಣು ಶಸ್ತ್ರಾಸ್ತ್ರಗಳಿವೆ. ಆದರೆ, ತಾಲಿಬಾನ್ ಬಳಿ ಅಂದಾಜು 1,72,000 ಯೋಧರು, ಆರು ಏರ್‌ಕ್ರಾಫ್ಟ್‌ಗಳು, ಮತ್ತು ಒಂದಷ್ಟು ಹೆಲಿಕಾಪ್ಟರ್‌ಗಳು ಮಾತ್ರವೇ ಇದ್ದು, ಇವು ಯಾವ ಪರಿಸ್ಥಿತಿಯಲ್ಲಿವೆ ಎನ್ನುವುದು ತಿಳಿದಿಲ್ಲ.
ಮೇಲ್ನೋಟಕ್ಕೆ, ಪಾಕಿಸ್ತಾನ ಸುಲಭವಾಗಿ ಗೆಲುವು ಸಾಧಿಸಬಹುದು ಎನ್ನುವಂತೆ ಕಾಣುತ್ತದೆ. ಆದರೆ, ಗೆರಿಲ್ಲಾ ಯೋಧರೊಡನೆ ಕಠಿಣವಾದ ಪರ್ವತ ಪ್ರದೇಶಗಳಲ್ಲಿ ನಡೆಸುವ ಯುದ್ಧದ ಫಲಿತಾಂಶ ಹೀಗೇ ಇರುತ್ತದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ.
ಈ ಮೊದಲು, ಚೀನಾ ಉಭಯ ದೇಶಗಳ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಪ್ರಯತ್ನ ನಡೆಸಿತು. ಆದರೆ, ಅಮೆರಿಕ, ಇಸ್ರೇಲ್ ಮತ್ತು ಇರಾನ್‌ಗಳನ್ನು ಒಳಗೊಂಡ, ವಿಶಾಲ ಕದನದ ಉದ್ವಿಗ್ನತೆ ಇಲ್ಲಿನ ಚಕಮಕಿಗೆ ಮತ್ತೆ ಬೆಂಕಿ ಹಚ್ಚಿದೆ. ಪಾಕಿಸ್ತಾನ ತನ್ನ ಮಿಲಿಟರಿ ಕ್ರಮವನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆಗಳು ಹೆಚ್ಚಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದು, ಅಫ್ಘಾನಿಸ್ತಾನವೂ ಗಡಿಯಾಚೆಗಿನ ದಾಳಿ ಮತ್ತು ಗೆರಿಲ್ಲಾ ಆಕ್ರಮಣಗಳ ಮೂಲಕ ಪ್ರತ್ಯುತ್ತರ ನೀಡಲಿದೆ.
ಎರಡು ನೆರೆ ರಾಷ್ಟ್ರಗಳು, ಅವೆರಡರ ನಡುವೆ 130 ವರ್ಷಗಳ ಹಿಂದೆ ಓರ್ವ ಬ್ರಿಟಿಷ್ ಅಧಿಕಾರಿ ಎಳೆದ ವಿವಾದಾತ್ಮಕ ಗಡಿಗೆ ಇಂದು ನೂರಾರು ಜನರು ಬೆಲೆ ತೆರುವಂತಾಗಿದೆ.

