ಟೆಹ್ರಾನ್/ಜಿನೀವಾ: ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ತೈಲ ಟ್ಯಾಂಕರ್ ಗಳಿಗೆ ಮಿಲಿಟರಿ ಬೆಂಗಾವಲು ಒದಗಿಸುವುದು ದೀರ್ಘಕಾಲಿಕವಾಗಿ 'ಸುಸ್ಥಿರ' ಭದ್ರತಾ ಕ್ರಮವಾಗುವುದಿಲ್ಲ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಕಡಲ ಸಂಸ್ಥೆ (IMO) ಹೇಳಿದೆ ಎಂದು Aljazeera ವರದಿ ಮಾಡಿದೆ.
ಸಂಸ್ಥೆಯ ಮುಖ್ಯಸ್ಥ ಆರ್ಸೆನಿಯೊ ಡೊಮಿಂಗ್ಯೂಜ್ ಅವರು Financial Timesಗೆ ನೀಡಿದ ಸಂದರ್ಶನದಲ್ಲಿ, ಮಿಲಿಟರಿ ಬೆಂಗಾವಲುಗಳು ಅಪಾಯವನ್ನು ಕಡಿಮೆ ಮಾಡಬಹುದಾದರೂ ಸಂಪೂರ್ಣ ಭದ್ರತೆಯನ್ನು ಖಾತರಿಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ.
'ಇಂತಹ ಕ್ರಮಗಳು ಅಪಾಯವನ್ನು ಇಳಿಸಬಹುದು. ಆದರೆ ಅಪಾಯ ಇನ್ನೂ ಉಳಿಯುತ್ತದೆ. ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ' ಎಂದು ಅವರು ಹೇಳಿದ್ದಾರೆ.
ಇರಾನ್ 'ಶತ್ರು ರಾಷ್ಟ್ರಗಳಿಗೆ' ಹಾರ್ಮುಝ್ ಜಲಸಂಧಿಯನ್ನು ಸ್ಥಗಿತಗೊಳಿಸಿದೆ ಎಂದು ಹೇಳುತ್ತಿರುವ ಹಿನ್ನೆಲೆಯಲ್ಲಿ, ಈ ಪ್ರಮುಖ ಜಲಮಾರ್ಗದ ಭದ್ರತೆ ಕುರಿತು ಜಾಗತಿಕ ಆತಂಕ ಹೆಚ್ಚಾಗಿದೆ. ಜಗತ್ತಿನ ತೈಲ ಸಾಗಣೆಯ ಮಹತ್ತರ ಭಾಗ ಇದೇ ಮಾರ್ಗದ ಮೂಲಕ ನಡೆಯುವುದರಿಂದ, ಯಾವುದೇ ವ್ಯತ್ಯಯವು ಇಂಧನ ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ನಡುವೆ, ಹಾರ್ಮುಝ್ ಜಲಸಂಧಿಯನ್ನು ಸುರಕ್ಷಿತಗೊಳಿಸಲು ಅಂತರರಾಷ್ಟ್ರೀಯ ನೌಕಾ ಒಕ್ಕೂಟ ರಚಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ. ಆದರೆ ಈ ಪ್ರಸ್ತಾವನೆಯನ್ನು ಹಲವು ಯುರೋಪಿಯನ್ ನಾಯಕರು ತಿರಸ್ಕರಿಸಿದ್ದಾರೆ.
ಜಲಸಂಧಿಯ ಭದ್ರತೆಗೆ ಮಿಲಿಟರಿ ಕ್ರಮ ಮಾತ್ರ ಸಾಕಾಗುವುದಿಲ್ಲ ಎಂದು ವಿಶ್ವಸಂಸ್ಥೆ ಸ್ಪಷ್ಟಪಡಿಸಿದ್ದು, ಸಮಗ್ರ ಮತ್ತು ದೀರ್ಘಕಾಲಿಕ ತಂತ್ರದ ಅಗತ್ಯತೆಯನ್ನು ಉಲ್ಲೇಖಿಸಿದೆ.

