ಟೆಹರಾನ್: ಇರಾನ್‌ನ ಬಲಿಷ್ಠ ರಾಷ್ಟ್ರೀಯ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಅವರನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿದೆ. ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಇರಾನ್‌ಗೆ ಇದು ಮತ್ತೊಂದು ದೊಡ್ಡ ಹೊಡೆತ ಎಂದೇ ವಿಶ್ಲೇಷಿಸಲಾಗುತ್ತಿದೆ.
ಲಾರಿಜಾನಿ ಅವರನ್ನು ಕಳೆದ ರಾತ್ರಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ.
ಆದರೆ, ಇರಾನ್ ಇದನ್ನು ಖಚಿತಪಡಿಸಿಲ್ಲ.
68 ವರ್ಷದ ಲಾರಿಜಾನಿ ಅವರನ್ನು ಇರಾನ್‌ನ ಅತ್ಯಂತ ಪ್ರಭಾವಶಾಲಿ ಭದ್ರತಾ ಮುಖ್ಯಸ್ಥ ಎಂದೇ ಪರಿಗಣಿಸಲಾಗುತ್ತಿತ್ತು. ಅಯಾತೊಲ್ಲಾ ಖಮೇನಿ ಹತ್ಯೆ ಬಳಿಕವೂ ಎದೆಗುಂದದೇ ಅವರು ಇಸ್ರೇಲ್, ಅಮೆರಿಕ ವಿರುದ್ಧ ಯುದ್ಧ ಮುಂದುವರಿಸಿದ್ದರು. ಇರಾನ್‌ನ ಪರಮಾಣು ನೀತಿ ಮತ್ತು ಕಾರ್ಯತಂತ್ರ ರಾಜತಾಂತ್ರಿಕತೆಯಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸಿದ್ದರು ಎಂದು ವರದಿ ತಿಳಿಸಿದೆ.
ಫೆಬ್ರುವರಿ 28ರಂದು ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಪರೋಮೋಚ್ಛ ನಾಯಕ ಅಯಾತೊಲ್ಲಾ ಖಮೇನಿ ಮೃತಪಟ್ಟಿದ್ದರು. ಪ್ರತಿಕ್ರಿಯೆಯಾಗಿ, ಇರಾನ್ ಸಹ ತೀವ್ರ ದಾಳಿ ನಡೆಸಿದೆ. ಗಲ್ಫ್ ದೇಶಗಳಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ಬಾಂಬ್‌ಗಳ ಸುರಿಮೆಳಗೈದಿದೆ.
ಯುದ್ಧ ಆರಂಭವಾದ ನಂತರ, ಅವರು ಇನ್ನಷ್ಟು ಶಕ್ತಿಶಾಲಿಯಾಗಿದ್ದರು. ಅಯಾತೊಲ್ಲಾ ಖಮೇನಿ ಹತ್ಯೆ ಬಳಿಕ ಮೊಜ್ತಬಾ ಖಮೇನಿ ಜೊತೆ ಗುರುತಿಸಿಕೊಂಡಿದ್ದರು.
ಮಂಗಳವಾರ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ತೀವ್ರ ದಾಳಿ ಸಂಘಟಿಸಿತ್ತು. ಅದಕ್ಕೆ ಮರು ದಾಳಿ ನಡೆಸಿದ ಇಸ್ರೇಲ್ ಲಾರಿಜಾನಿ ಅವರನ್ನು ಕೊಂದಿದೆ ಎಂದು ವರದಿ ತಿಳಿಸಿದೆ.
ರಾತ್ರಿ ಟೆಹರಾನ್‌ನಲ್ಲಿ ಗುಡುಗು ಸಹಿತ ಭಾರಿ ಮಳೆಯ ಜೊತೆಗೆ ಭಾರಿ ಬಾಂಬ್ ದಾಳಿಯು ನಡೆದಿದೆ ಎಂದು ವರದಿ ತಿಳಿಸಿದೆ.

