ನವದೆಹಲಿ: 'ಸೈಬರ್ ಅಪರಾಧಗಳಿಗೆ ಮಹಿಳೆಯರು ಮತ್ತು ಮಕ್ಕಳು ಬಲಿಯಾಗುವುದು ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಕಾನೂನು ಕ್ರಮಗಳನ್ನು ಬಿಗಿಗೊಳಿಸುವ ಜತೆಯಲ್ಲೇ, ಸಂಘಟಿತ ಪ್ರಯತ್ನಗಳನ್ನು ನಡೆಸಬೇಕು' ಎಂದು ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಹೇಳಿದ್ದಾರೆ.
ಗೃಹ ಸಚಿವಾಲಯದ ಅಧೀನದಲ್ಲಿ ಬರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ಇಲ್ಲಿ ಆಯೋಜಿಸಿದ್ದ 'ಮಹಿಳೆಯರು ಮತ್ತು ಮಕ್ಕಳ ಮೇಲಿನ ಆನ್‌ಲೈನ್ ಅಪರಾಧ'ಗಳಿಗೆ ಸಂಬಂಧಿಸಿದ ಸಂವಾದದಲ್ಲಿ ಅವರು ಮಾತನಾಡಿದರು.
'ಸೈಬರ್ ಅಪರಾಧಗಳನ್ನು ಮಟ್ಟಹಾಕಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಟ್ಟದಲ್ಲಿ ಸಾಂಸ್ಥಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಸಮಯೋಜಿತ ತನಿಖೆಗೆ, ಬಲಿಪಶುಗಳಾಗುವವರಿಗೆ ನೆರವು ನೀಡಲು ಹಾಗೂ ಅಪರಾಧಿಗಳ ವಿರುದ್ಧ ತ್ವರಿತ ಕ್ರಮಕ್ಕೆ ವಿಶೇಷ ಘಟಕಗಳನ್ನು ಅಭಿವೃದ್ಧಿಪಡಿಸಬೇಕು. ಕಾನೂನು ಜಾರಿ ಸಂಸ್ಥೆಗಳು ಮಹಿಳೆಯರು ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧಗಳ ತನಿಖೆಗೆ ಆದ್ಯತೆ ನೀಡಬೇಕು' ಎಂದು ಅವರು ಹೇಳಿದರು.

