ಪಶ್ಚಿಮ ಬಂಗಾಳ ಹೊರತುಪಡಿಸಿ, ಚುನಾವಣೆ ನಡೆಯಲಿರುವ ರಾಜ್ಯಗಳ ಗಣತಿ ವೇಳಾಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ. ಪುದುಚೇರಿಯಲ್ಲಿ ಮೇ 17ರಿಂದ ಸ್ವಯಂ ಎಣಿಕೆ ಮತ್ತು ಜೂನ್ 1ರಿಂದ ಮನೆ ಮನೆಗೆ ತೆರಳಿ ಎಣಿಕೆ ನಡೆಯಲಿದೆ. ಕೇರಳದಲ್ಲಿ ಕ್ರಮವಾಗಿ ಜೂನ್ 16 ಮತ್ತು ಜುಲೈ 1ರಂದು ಗಣತಿ ನಡೆಯಲಿದೆ. ತಮಿಳುನಾಡಿನಲ್ಲಿ ಕ್ರಮವಾಗಿ ಜುಲೈ 17 ಮತ್ತು ಆಗಸ್ಟ್ 1 ರಂದು ಹಾಗೂ ಅಸ್ಸಾಂನಲ್ಲಿ ಆಗಸ್ಟ್ 2 ಮತ್ತು ಆಗಸ್ಟ್ 17 ರಂದು ಗಣತಿ ಜರುಗಲಿದೆ. ಸ್ವಯಂ ಗಣತಿ ಆರಂಭವಾಗುವ (ಆಗಸ್ಟ್ 17ರಿಂದ) ಮತ್ತು ಮನೆ ಮನೆ ಎಣಿಕೆ ಪ್ರಕ್ರಿಯೆ (ಸೆಪ್ಟೆಂಬರ್ 1ರಿಂದ 30) ಪೂರ್ಣಗೊಳಿಸುವ ಕೊನೆಯ ರಾಜ್ಯ ಮಣಿಪುರವಾಗಲಿದೆ.
ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್, 'ಮೊದಲ ಹಂತದ ಜನಗಣತಿಗೆ 33 ಪ್ರಶ್ನೆಗಳನ್ನು ಸೇರಿಸಲಾಗಿದೆ. ಎರಡನೇ ಹಂತದಲ್ಲಿ ಕೇಳಲಾಗುವ ಜಾತಿ ಸೇರಿದಂತೆ ಇತರ ಪ್ರಶ್ನೆಗಳನ್ನು ನಂತರ ಸೇರಿಸಲಾಗುವುದು' ಎಂದರು.
ಜಾತಿ ಗಣತಿ ಹೇಗೆ ನಡೆಯುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರಿಸದ ಅವರು, 'ಅಂತಹ ವಿವರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಗೊಳಿಸಲಾಗುವುದು' ಎಂದರು.

