ನವದೆಹಲಿ (PTI): 'ದೇಶ ಎದುರಿಸುತ್ತಿರುವ ಪ್ರಸ್ತುತ ಆರ್ಥಿಕ ಬಿಕ್ಕಟ್ಟಿಗೆ ಉತ್ತರಿಸಲು ಮೋದಿ ಸರ್ಕಾರವು ಯಾವುದೇ ನಿರ್ದೇಶನ ಹಾಗೂ ಕಾರ್ಯತಂತ್ರ ಹೊಂದಿಲ್ಲ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
'ಮುಂದಿನ ತಿಂಗಳು ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಹಾಗೂ ಪುದುಚೆರಿ ವಿಧಾನಸಭಾ ಚುನಾವಣೆಯ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಲಿದೆ.
ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಕೈಗಾರಿಕಾ ಇಂಧನದ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೂ ಪರಿಣಾಮ ಬೀರಲಿದೆ' ಎಂದು ಅವರು ಆರೋಪಿಸಿದ್ದಾರೆ.
'ಕೇಂದ್ರ ಸರ್ಕಾರಕ್ಕೆ ಯಾವುದೇ ಗುರಿಯಿಲ್ಲ. ಎಲ್ಲವೂ ಸಾಮಾನ್ಯ ಎಂದು ಹೇಳಿಕೊಳ್ಳುತ್ತಿದೆ. ವಾಸ್ತವದಲ್ಲಿ ಬೆಲೆ ಏರಿಕೆಯಿಂದ ದಿನಬಳಕೆಯ ವಸ್ತುಗಳು ಏರಿಕೆಯಾಗಿದ್ದು, ಪ್ರತಿಯೊಬ್ಬರ ಮನೆ ಮೇಲೂ ಪರಿಣಾಮ ಬೀರುತ್ತಿದೆ' ಎಂದು ಹೇಳಿದ್ದಾರೆ.
'ಡಾಲರ್ ಎದುರು ರೂಪಾಯಿ ಮೌಲ್ಯದ ₹100ರತ್ತ ದಾಪುಗಾಲಿಡುತ್ತಿದೆ. ಇಂಧನ ಕೈಗಾರಿಕೆ ಬೆಲೆ ಏರಿಕೆಯಾಗಿದ್ದು, ಇದು ಹುಣದುಬ್ಬರದ ಸ್ಪಷ್ಟ ಮುನ್ಸೂಚನೆಯಾಗಿದೆ' ಎಂದು ತಿಳಿಸಿದ್ದಾರೆ.
'ಸರ್ಕಾರವೂ ಎಲ್ಲವನ್ನೂ ಸಾಮಾನ್ಯ ಎಂಬಂತೆ ಬಿಂಬಿಸುತ್ತಿದೆ. ವಾಸ್ತವದಲ್ಲಿ ಉತ್ಪಾದನೆ ಹಾಗೂ ಸಾಗಣೆ ವೆಚ್ಚ ದುಬಾರಿಯಾಗಲಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಲಿದೆ. ನಿತ್ಯವೂ ಬೆಲೆ ಏರಿಕೆಯಾಗುತ್ತಿದೆ. ವಿದೇಶಿ ಬಂಡವಾಳ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಹಣವನ್ನು ಹಿಂದಕ್ಕೆ ಪಡೆಯುತ್ತಿದ್ದು, ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಒತ್ತಡ ಸೃಷ್ಟಿಯಾಗುತ್ತಿದೆ' ಎಂದು 'ಎಕ್ಸ್'ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

