ನವದೆಹಲಿ/ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆಯನ್ನು ಮಣಿಸಲು ಕಾರ್ಯತಂತ್ರ ರೂಪಿಸುವ ಬಗ್ಗೆ ಮಾತ್ರ ಕೇಂದ್ರ ಸಚಿವ ಅಮಿತ್ ಶಾ ಅವರ ಜೊತೆ ಮಾತುಕತೆ ನಡೆಸಲಾಗಿದೆ. ಸೀಟು ಹಂಚಿಕೆಯ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ ದಿನಕರನ್ ಅವರು ಶನಿವಾರ ತಿಳಿಸಿದ್ದಾರೆ.
'ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆ ನಿರ್ಧಾರವು ಮುಂದಿನ ಎರಡು-ಮೂರು ದಿನಗಳಲ್ಲಿ ಚೆನ್ನೈನಲ್ಲೆ ಅಂತಿಮಗೊಳ್ಳಲಿದೆ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಎಎಂಎಂಕೆಯ ಮಿತ್ರಪಕ್ಷವಾದ ಎಐಡಿಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಅವರು ಪದೇ ಪದೇ ದೆಹಲಿಗೆ ಭೇಟಿ ನೀಡಿ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ ಬಗ್ಗೆ ಟೀಕಿಸಿದ್ದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು, 'ಮುಂಬರುವ ವಿಧಾನಸಭಾ ಚುನಾವಣೆಯು ತಮಿಳುನಾಡು ಮತ್ತು ದೆಹಲಿ ತಂಡದ ನಡುವಿನ ಸ್ಪರ್ಧೆಯಾಗಿರಲಿದೆ' ಎಂದು ಹೇಳಿದ್ದರು.
'ನಾವು ದೆಹಲಿಗೆ ಬರುವುದು ನಿಮಗೆ ಯಾಕೆ ಇಷ್ಟವಿಲ್ಲ' ಎಂದು ದಿನಕರನ್ ಸುದ್ದಿಗಾರರನ್ನು ಪ್ರಶ್ನಿಸಿದರು.
ಎಐಎಡಿಎಂಕೆಗೆ ಸಿಂಹಪಾಲು
ಎಐಎಡಿಎಂಕೆ-ಎನ್‌ಡಿಎ ಸೀಟು ಹಂಚಿಕೆ ಪ್ರಕ್ರಿಯೆ ನಿರ್ಣಾಯಕ ಹಂತಕ್ಕೆ ತಲುಪಿದ್ದು ಎಐಎಡಿಎಂಕೆಯು ಸಿಂಹ ಪಾಲು ಪಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. '234 ಕ್ಷೇತ್ರಗಳ ಪೈಕಿ ಎಐಎಡಿಎಂಕೆ ಪಕ್ಷವು ಸುಮಾರು 160-170 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಗುರುವಾರ ದೆಹಲಿಯಲ್ಲಿ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಿದ್ದಾರೆ' ಎಂದು ತಿಳಿಸಿವೆ. 'ಬಿಜೆಪಿ 30 ಮತ್ತು ಪಿಎಂಕೆ 17 ಎಎಂಎಂಕೆ 9 ಮತ್ತು ಟಿಎಂಸಿ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ' ಎಂದು ಮಾಹಿತಿ ನೀಡಿವೆ.

