ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ನಿಷೇಧಿಸುವಂತೆ ಶಿಫಾರಸು ಮಾಡಿದ ಅಮೆರಿಕ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿಯನ್ನು (ಯುಎಸ್‌ಸಿಐಆರ್‌ಎಫ್) ಭಾರತದ ನಿವೃತ್ತ ನ್ಯಾಯಾಧೀಶರು, ನಿವೃತ್ತ ಸರ್ಕಾರಿ ಹಿರಿಯ ಅಧಿಕಾರಿಗಳು ಹಾಗೂ ನಿವೃತ್ತ ಸೇನಾಧಿಕಾರಿಗಳು ಸೇರಿದಂತೆ 275ಕ್ಕೂ ಅಧಿಕ ಮಂದಿ ಟೀಕಿಸಿದ್ದಾರೆ.
'ಇದು ಬೌದ್ಧಿಕ ದಿವಾಳಿತನ ಹಾಗೂ ಗೊಂದಲಮಯ ಲೆಕ್ಕಾಚಾರಗಳನ್ನು ಪ್ರದರ್ಶಿಸುತ್ತದೆ' ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ಜಂಟಿ ಹೇಳಿಕೆಯನ್ನು ಶನಿವಾರ ಬಿಡುಗಡೆಗೊಳಿಸಿದ್ದು, 'ತೀವ್ರ ಪೂರ್ವಾಗ್ರಹಪೀಡಿತ ಹಾಗೂ ಅಸಮರ್ಥನೀಯ ವರದಿಗೆ ಕೊಡುಗೆ ನೀಡಿದ ಎಲ್ಲರ ಕುರಿತಂತೆ ಅಮೆರಿಕವು ತೀವ್ರ ಪರಿಶೀಲನೆ ನಡೆಸಬೇಕು. ದೇಶದ ಜನರೊಂದಿಗಿನ ಸೌಹಾರ್ದ ಹಾಳುಮಾಡುವ ಗುರಿ ಹೊಂದಿರುವ ಸ್ಥಾಪಿತ ಹಿತಾಸಕ್ತಿಗಳು ವರದಿ ತಯಾರಿಸಿವೆ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ಆರ್‌ಎಸ್‌ಎಸ್ ಜೊತೆಗೆ ನಂಟು ಹೊಂದಿರುವ ಭಾರತೀಯರ ಆಸ್ತಿಗಳನ್ನು ಮುಟ್ಟುಗೋಲು ಹಾಕಿ, ಅವರ ಚಲನವಲನದ ಮೇಲೆ ನಿರ್ಬಂಧ ವಿಧಿಸಲು ಯುಎಸ್‌ಸಿಐಆರ್‌ಎಫ್ ಶಿಫಾರಸು ಮಾಡಿರುವುದು ದಿವಾಳಿತನದ ಪ್ರದರ್ಶನವಾಗಿದೆ. ಇದುವರೆಗೂ ಸಮಿತಿಗೆ ಆರು ಆಯುಕ್ತರನ್ನು ನೇಮಿಸಲಾಗಿದ್ದು, ಅಮೆರಿಕದ ತೆರಿಗೆ ಹಣದಿಂದ ಅಮೆರಿಕ ಕಾಂಗ್ರೆಸ್‌ನಿಂದ ನೇಮಿಸಲಾಗಿದೆ. ಈ ವರದಿಗೆ ಕೊಡುಗೆ ನೀಡಿದ ಎಲ್ಲರ ಹಿನ್ನೆಲೆಯನ್ನೂ ಅಮೆರಿಕ ಸರ್ಕಾರವು ಸಮಗ್ರವಾಗಿ ಪರಿಶೀಲನೆ ಮಾಡಬೇಕು' ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪತ್ರಕ್ಕೆ 275 ಮಂದಿ ಸಹಿ ಹಾಕಿದ್ದು, ಇದರಲ್ಲಿ 25 ಮಂದಿ ನಿವೃತ್ತ ನ್ಯಾಯಾಧೀಶರು, 119 ಮಂದಿ ನಿವೃತ್ತ ಅಧಿಕಾರಿಗಳು, 10 ಮಂದಿ ನಿವೃತ್ತ ರಾಯಭಾರಿಗಳು, 131 ಮಂದಿ ಸೇನೆಯ ನಿವೃತ್ತ ಅಧಿಕಾರಿಗಳು ಇದ್ದಾರೆ.

