ಕಾಸರಗೋಡು: ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ಹಾಗೂ ಆವೇಶ ಭರಿತ ರೋಡ್ ಶೋ ನಡೆಸುವ ಮೂಲಕ ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ಅಶ್ವಿನಿ ಎಂ. ಎಲ್. ಸೋಮವಾರ ನಾಮಪತ್ರ ಸಲ್ಲಿಸಿದರು. ಕರಂದಕ್ಕಾಡು ಮೈದಾನದಿಂದ ಆರಂಭಗೊಂಡ ರೋಡ್ ಶೋ ಮೆರವಣಿಗೆಯಲ್ಲಿ ಪನ್ವೇಲ್ ಶಾಸಕ ಪ್ರಶಾಂತ್ ಠಾಕೂರ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕನ್ನಡ ಚಿತ್ರರಂಗದ ತಾರೆ ಹರ್ಷಿಕಾ ಪೂಣಚ್ಚ ಬಿಜೆಪಿ ಕೋಯಿಕ್ಕೋಡ್ ವಲಯ ಅಧ್ಯಕ್ಷ ಹಾಗೂ ಚುನಾವಣಾಧಿಕಾರಿ ವಕೀಲ ಕೆ.ಶ್ರೀಕಾಂತ್ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂಮೊದಲು ಅಶ್ವಿನಿ ಎಂ.ಎಲ್ ಅವರು ಎಡನೀರು ಮಠಕ್ಕೆ ತೆರಳಿ ಎಡನೀರು ಶ್ರೀಗಳವರಿಂದ ಮಂತ್ರಾಕ್ಷತೆ ಪಡೆದುಕೊಂಡರು. ನಂತರ ಮೆರವಣಿಗೆಯಲ್ಲಿ ಸಾಗಿ ಕಾಸರಗೋಡು ಆರ್ ಡಿ ಒ ಬಿನು ಜೋಸೆಫ್ ಅವರಿಗೆ ನಾಮ ಪತ್ರ ಸಲ್ಲಿಸಿದರು.

