ಹವಾನಾ: ಇಂಧನ ಬಿಕ್ಕಟ್ಟಿನಿಂದ ಮುಕ್ತಿ ಪಡೆಯುವ ಸಲುವಾಗಿ ಕ್ಯೂಬಾವು ಅಮೆರಿಕದ ಸರ್ಕಾರದೊಂದಿಗೆ ಮಾತುಕತೆ ಆರಂಭಿಸಿದೆ.
ಈ ಕುರಿತು ವದಂತಿಗಳು ಹಬ್ಬುತ್ತಿದ್ದ ಬೆನ್ನಲ್ಲೇ, ಮಾತುಕತೆ ನಡೆದಿರುವುದನ್ನು ಕ್ಯೂಬಾ ಅಧ್ಯಕ್ಷ ಮಿಗೇಲ್ ಡಿಯಾಸ್ ಖಾನೀಲ್ ಖಚಿತಪಡಿಸಿದ್ದಾರೆ.
ಇಲ್ಲಿಯವರೆಗೆ ವೆನೆಜುವೆಲಾವು ಕ್ಯೂಬಾಕ್ಕೆ ಇಂಧನ ಪೂರೈಸುತ್ತಿತ್ತು. ಆದರೆ, ಇದರ ಅಧ್ಯಕ್ಷ ನಿಕೊಲಸ್ ಮಡುರೊ ಅವರನ್ನು ಸೆರೆಹಿಡಿದ ಬಳಿಕ, ಇಂಧನ ಪೂರೈಕೆಯನ್ನು ಅಮೆರಿಕ ತಡೆದಿತ್ತು. ಇದರಿಂದಾಗಿ ಕ್ಯೂಬಾದಲ್ಲಿ ಭಾರಿ ಇಂಧನ ಬಿಕ್ಕಟ್ಟು ಸೃಷ್ಟಿಯಾಗಿದೆ.
'ಎರಡೂ ದೇಶಗಳ ಮಧ್ಯೆ ದ್ವಿಪಕ್ಷೀಯವಾದ ಹಲವು ಭಿನ್ನಾಭಿಪ್ರಾಯಗಳಿವೆ. ಆದರೆ, ಮಾತುಕತೆಗಳ ಮೂಲಕ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ. ಅಂತರರಾಷ್ಟ್ರೀಯ ಬೆಳವಣಿಗೆಗಳು ಮಾತುಕತೆ ನಡೆಯುವಂತೆ ಮಾಡಿವೆ' ಎಂದು ಮಿಗೇಲ್ ಡಿಯಾಸ್ ಖಾನೀಲ್ ಹೇಳಿದ್ದಾರೆ.
ಖಾನೀಲ್ ಅವರ ಹೇಳಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಶ್ವೇತ ಭವನವು, 'ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಮಾತುಕತೆಯ ನೇತೃತ್ವ ವಹಿಸಿದ್ದಾರೆ. ಕ್ಯೂಬಾದ ನೀತಿಗಳು ಹಾಗೂ ಆಡಳಿತವನ್ನು ಬದಲಾಯಿಸಬೇಕು ಎಂಬ ಉದ್ದೇಶವಿದೆ' ಎಂದಿತ್ತು.

