ಉಪ್ಪಳ: 'ಇಕೋ ಸೈನ್ಸ್ ವಿದ್ಯಾರ್ಥಿ ಹಸಿರು ಸೇನೆ ಸ್ಕಾಲರ್ಶಿಪ್-ಶುಚಿತ್ವೋತ್ಸವ' ಕಾರ್ಯಕ್ರಮ ಮಂಗಲ್ಪಾಡಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು. ಮಂಗಲ್ಪಾಡಿ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಮಾನ್ ಉದ್ಘಾಟಿಸಿ, ಇದೊಂದು ಕೇವಲ ಕಾರ್ಯಕ್ರಮ ಎನ್ನುವುದಕ್ಕಿಂತ ಹೆಚ್ಚಾಗಿ, ಪರಿಸರದ ಬಗ್ಗೆ ಹೊಸ ಪೀಳಿಗೆಗೆ ಜವಾಬ್ದಾರಿಯನ್ನು ಕಲಿಸುವ ಅದ್ಭುತ ಪ್ರಯತ್ನ ಎಂದರು. ಮಕ್ಕಳೊಂದಿಗೆ ಸಂವಾದ ನಡೆಸಿ, ನಮ್ಮ ಮುಂದಿನ ಪೀಳಿಗೆ ಕೇವಲ ಪ್ರೇಕ್ಷಕರಲ್ಲ, ಬದಲಾಗಿ ಸ್ಪಷ್ಟವಾದ ದೃಷ್ಟಿಕೋನ ಹೊಂದಿರುವವರು ಮತ್ತು ದೊಡ್ಡ ಕನಸುಗಳನ್ನು ಕಾಣುವ ಶಕ್ತಿಯುಳ್ಳವರು.
ದೇಶದ ಭವಿಷ್ಯ ಈ ಮಕ್ಕಳ ಕೈಯಲ್ಲಿದೆ. ಅವರಿಗೆ ದೊಡ್ಡ ಕನಸುಗಳನ್ನು ಕಾಣಲು ಪ್ರೇರೇಪಿಸುವುದೇ ಇಂತಹ ಕಾರ್ಯಕ್ರಮಗಳ ನಿಜವಾದ ಯಶಸ್ಸು. ಕಸದಿಂದ ರಸ ಎಂಬ ಪರಿಕಲ್ಪನೆಯ ಚಟುವಟಿಕೆಗಳ ಮೂಲಕ ತ್ಯಾಜ್ಯವನ್ನೇ ಕಲೆಯನ್ನಾಗಿ ಪರಿವರ್ತಿಸಿದ ಮಕ್ಕಳ ಸೃಜನಶೀಲತೆ ನಿಜಕ್ಕೂ ಅಚ್ಚರಿ ತರಿಸುತ್ತದೆ. ಹಸಿರು ಸೇನೆಯ ಭಾಗವಾಗಿ ಸ್ಕಾಲರ್ಶಿಪ್ ಪಡೆದ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ. ನಮ್ಮ ನಾಡನ್ನು ಮಾಲಿನ್ಯಮುಕ್ತವಾಗಿ ಮತ್ತು ಹಸಿರಾಗಿರಿಸಲು ಈ ಪುಟ್ಟ ಸೈನ್ಯ ಮುಂಚೂಣಿಯಲ್ಲಿರಬೇಕೆಂದು ಕಿವಿ ಮಾತನ್ನಾಡಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಉಮ್ಮರ್ ಅಪೆÇಲೊ, ಅರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಕ್, ಗ್ರಾಮ ಪಂ. ಸದಸ್ಯರು, ಪಂಚಾಯತಿ ಉಪ ಕಾರ್ಯದರ್ಶಿ ಅಂಜು ಉಪಸ್ಥಿತರಿದ್ದು ಶುಭ ಹಾರೈಸಿದರು. ಪಂಚಾಯತಿ ಆರೋಗ್ಯ ಪರಿವೀಕ್ಷಕಿ ರಜನಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯಯತಿ ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಳಿಕ ವಿದ್ಯಾರ್ಥಿಗಳ ಪೇಪರ್ ಪ್ರೆಸೆಂಟೇಷನ್, ಕರಕುಶಲ ಪ್ರದರ್ಶನ ಮೊದಲಾದ ಕಾರ್ಯಕ್ರಮ ನಡೆಯಿತು. ಹಸಿರು ಸ್ಕಾಲರ್ ಶಿಪ್ ನ ಪ್ರಶಂಸಾ ಪತ್ರವನ್ನು ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರೆಹಮಾನ್ ವಿತರಿಸಿದರು.
ಮುಳಿಂಜ ಶಾಲಾ ಮುಖ್ಯ ಶಿಕ್ಷಕಿ, ಪಂಚಾಯತಿ ವಿದ್ಯಾಭ್ಯಾಸ ಸಮಿತಿಯ ಕಾರ್ಯದರ್ಶಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ, ಶುಚಿತ್ವ ಮಿಷನ್ ಸಂಯೋಜಕಿ ಸತ್ಯವತಿ ವಂದಿಸಿದರು.

.jpg)
.jpg)
