ನವದೆಹಲಿ: ಸರ್ಕಾರದ ಎಲ್ಲ ಅಧಿಕೃತ ಕಾರ್ಯಕ್ರಮಗಳಲ್ಲಿ, ಶಾಲೆಗಳಲ್ಲಿ ರಾಷ್ಟ್ರೀಯ ಗೀತೆಯಾದ 'ವಂದೇ ಮಾತರಂ' ಹಾಡುವ ಕುರಿತು ಕೇಂದ್ರ ಗೃಹ ಸಚಿವಾಲಯ ಇದೇ ಜನವರಿಯಲ್ಲಿ ಹೊರಡಿಸಿದ್ದ ಸುತ್ತೋಲೆಯ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾ ಮಾಡಿತು.
'ವಂದೇ ಮಾತರಂ' ಹಾಡುವುದು ಕಡ್ಡಾಯ ಎಂದು ಹೇಳಲಾಗಿಲ್ಲ' ಎಂದು ನ್ಯಾಯಾಲಯ ಹೇಳಿತು.
ಭಾರತೀಯ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್ ಮಲ್ಯಾ ಬಾಗ್ಚಿ ಮತ್ತು ವಿಫುಲ್ ಎಂ. ಪಂಚೋಲಿ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಮೊಹಮ್ಮದ್ ಸೈಯದ್ ನೂರಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ಸಂಜಯ್ ಹೆಗಡೆ ವಾದಿಸಿದರು.
'ವಂದೇ ಮಾತರಂ' ಹಾಡಲೇಬೇಕು ಎನ್ನುವುದು ಕಡ್ಡಾಯ ಎಂಬಂತೆ ಸುತ್ತೋಲೆಯಲ್ಲಿ ಎಲ್ಲೂ ಇಲ್ಲ. ಒಂದು ವೇಳೆ ಹಾಡಲಿಲ್ಲ ಎಂದಾದರೆ, ಅದಕ್ಕೆ ಶಿಕ್ಷೆಯನ್ನೂ ಹೇಳಲಾಗಿಲ್ಲ. ಆದ್ದರಿಂದ, ಇಲ್ಲದೇ ಇರುವ ಆತಂಕವನ್ನು ಸೃಷ್ಟಿಸಿಕೊಂಡು ಅರ್ಜಿ ಸಲ್ಲಿಸಲಾಗಿದೆ' ಎಂದು ನ್ಯಾ. ಪಂಚೋಲಿ ಅಭಿಪ್ರಾಯಪಟ್ಟರು.
'ಸುತ್ತೋಲೆಯಲ್ಲಿ ಹಾಡಬಹುದು ಎಂದಿದೆ. ಇದು ಸಲಹೆಯಷ್ಟೆ. ರಾಷ್ಟ್ರೀಯ ಗೀತೆಯನ್ನು ಹಾಡದಿದ್ದಲ್ಲಿ, ನಿಮಗೆ ಯಾರಾದರೂ ಶಿಕ್ಷೆ ನೀಡಿದರೆ ನಮ್ಮ ಬಳಿ ಬನ್ನಿ ಎಂದು ಸಿಜೆಐ ಹೇಳಿದರು.

